LatestTop Storiesಕಲಬುರಗಿ-Kalaburagi

ಮತ್ತೆ ಕಲುಷಿತ ಆಹಾರ ಸೇವಿಸಿ ವಸತಿ ಶಾಲಾ ಮಕ್ಕಳು ಅಸ್ವಸ್ಥ. 1 ತಿಂಗಳಲ್ಲಿ 3ನೇ ಘಟನೆ

ಕಲಬುರಗಿ: ಗೃಹ ಸಚಿವ ಡಾ. ಪ್ರಿಯಾಂಕ ಖರ್ಗೆ ಮತ್ತು ವೈದ್ಯಕೀಯ ಶಿಕ್ಷಣ ಸಚಿವರ ತವರು ಜಿಲ್ಲೆಯಾದ ಕಲಬುರಗಿಯಲ್ಲಿ ಕಲುಷಿತ ಆಹಾರ ಸೇವಿಸಿ ಮಕ್ಕಳು ಅಸ್ವಸ್ಥವಾಗುತ್ತಿರುವ ಪ್ರಕರಣಗಳು ಮುಂದುವರೆದಿವೆ.ಈಗ ಸೇಡಂ ತಾಲೂಕಿನ ಮುಧೋಳ ಗ್ರಾಮದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ 20ಕ್ಕೂ ಹೆಚ್ಚು ಮಕ್ಕಳು ವಾಂತಿ, ಭೇದಿಯಿಂದ ಅಸ್ವಸ್ಥಗೊಂಡಿದ್ದಾರೆ.

ಸೇಡಂ ತಾಲೂಕಿನ ಮುಧೋಳ ಗ್ರಾಮದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. 6ನೇ ತರಗತಿಯಿಂದ 10ನೇ ತರಗತಿವರೆಗಿನ ಒಟ್ಟು 230 ವಿದ್ಯಾರ್ಥಿಗಳು ಈ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.ಶನಿವಾರ ರಾತ್ರಿ ಊಟ ಮಾಡಿದ 100 ವಿದ್ಯಾರ್ಥಿಗಳಲ್ಲಿ 20 ವಿದ್ಯಾರ್ಥಿಗಳಿಗೆ ವಾಂತಿ, ಭೇದಿ ಕಾಣಿಸಿಕೊಂಡಿದೆ. ಈ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಅಸ್ವಸ್ಥಗೊಂಡ ಮಕ್ಕಳನ್ನು ತಕ್ಷಣ ಮುಧೋಳ್‌ನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಕಳೆದ ಒಂದು ತಿಂಗಳಲ್ಲೇ ಜಿಲ್ಲೆಯಲ್ಲಿ ಇದು ಮೂರನೇ ಪ್ರಕರಣವಾಗಿದೆ.

  1. ಚಿತ್ತಾಪುರ ತಾಲೂಕಿನ ದಂಡೋತಿ
  2. ಅಫಜಲಪುರ ತಾಲೂಕಿನ ಕರಜಗಿ ಗ್ರಾಮ
  3. ಈಗ ಸೇಡಂ ತಾಲೂಕಿನ ಮುಧೋಳ ಗ್ರಾಮ

ಒಂದು ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ವರದಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.ಪದೇ ಪದೇ ವಸತಿ ಶಾಲೆಗಳಲ್ಲಿ ಕಳಪೆ ಗುಣಮಟ್ಟದ ಆಹಾರ ಸರಬರಾಜಾಗುತ್ತಿರುವುದಕ್ಕೆ ಪೋಷಕರು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರೇ, ವೈದ್ಯಕೀಯ ಶಿಕ್ಷಣ ಸಚಿವರೇ ಏನಿದು ಅವ್ಯವಸ್ಥೆ? ಬಡ ಮಕ್ಕಳು ಅಂದ್ರೆ ಯಾಕೀ ತಾತ್ಸಾರ?` ಎಂದು ಅವರು ಪ್ರಶ್ನಿಸಿದ್ದಾರೆ.

ಹೋಟೆಲ್‌ಗಳ ಮೇಲೆ ದಾಳಿ ಮಾಡಿ ಆಹಾರ ಗುಣಮಟ್ಟ ಪರೀಕ್ಷಿಸುವ ಅಧಿಕಾರಿಗಳು, ಬಡ ಮಕ್ಕಳ ವಸತಿ ಶಾಲೆಗಳ ಆಹಾರ ಗುಣಮಟ್ಟ ಪರೀಕ್ಷೆ ಮಾಡೋದು ಯಾವಾಗ? ಮಕ್ಕಳಿಗೆ ಗುಣಮಟ್ಟದ ಆಹಾರ ನೀಡೋದು ಯಾವಾಗ?` ಎಂದು ಅವರು ಆಗ್ರಹಿಸಿದ್ದಾರೆ.ಘಟನೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ. ಆಹಾರ ಮಾದರಿಗಳನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ. ವಸತಿ ಶಾಲೆಗಳ ಆಹಾರ ಪೂರೈಕೆದಾರರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Share with Friends
author avatar
Digital Desk