
“ಲೋಕಾ” ರಣಭೇಟೆ .. ೧೦ ಭ್ರಷ್ಟ ತಿಮಿಂಗಿಲಗಳು ಬಲೆಗೆ..
ಬೆಂಗಳೂರು,ಜು.8- ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಇಂದು ರಾಜ್ಯದ ಬೆಂಗಳೂರು, ಧಾರವಾಡ, ರಾಯಚೂರು, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಐವರು ಇಂಜಿನಿಯರ್ ಗಳು ಸೇರಿ 10 ಮಂದಿ ಭ್ರಷ್ಟ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ರಾಯಚೂರಿನ ಕೃಷ್ಣ ಭಾಗ್ಯ ಜಲನಿಗಮದ ಕಾರ್ಯನಿರ್ವಾಹಕ ಇಂಜಿನಿಯರ್ ಬಸನಗೌಡ ಪಾಟೀಲ್,ಚಿತ್ರದುರ್ಗದ ತೋಟಗಾರಿಕಾ ವಿಶ್ವವಿದ್ಯಾಲಯದ ಸಹಾಯಕ ಪ್ರೋಪೆಸರ್ ಶಂಕರ್ ಎಂ,ಚಿತ್ರದುರ್ಗದ ವಲಯ ಅರಣ್ಯಾಧಿಕಾರಿ ದುಗ್ಗಪ್ಪ ಬಿ.ಹೆಚ್,ಬೆಂಗಳೂರಿನ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ನರೇಂದ್ರ ಕುಮಾರ್,ಕೆಆರ್ ಡಿಎಲ್ ನ ಸೂಪರಿಂಟೆಂಡೆಂಟ್ ಇಂಜಿನಿಯರ್ ಪ್ರವೀಣ್ ಬಿ.ಶ್ರೀ ಹರಿ,ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿಯ ಉಪ ನಿರ್ದೇಶಕಿ ಪುಷ್ಪ ಡಿ.ಆರ್,ತುಮಕೂರಿನ ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ಮಧುಸೂದನ್,ಬೆಂಗಳೂರು ದಕ್ಷಿಣ ಕುಂಬಳಗೋಡು ಪಂಚಾಯತ್ ನ ಪಿಡಿಓ ತಿಮ್ಮೇಗೌಡ,ಶಿವಮೊಗ್ಗದ ಸಂಶೋಧನಾ ವಿಭಾಗದ ಅಸಿಸ್ಟೆಂಟ್ ಕನ್ಸರ್ ವೇಟರ್ ಫಾರೆಸ್ಟ್ ಕಿರಣ್ ಅಂಗಡಿ ಹಾಗೂ ಕಲಬುರಗಿಯ ಗೆಸ್ಕಾಂನ ಎಇಇ ಅಮೃತರಾವ್ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಭ್ರಷ್ಟ ಅಧಿಕಾರಿಗಳಾಗಿದ್ದಾರೆ.
ತೋಟಗಾರಿಕೆ,ನೀರಾವರಿ ಸೇರಿ ವಿವಿಧ ಇಲಾಖೆಗಳ ಈ ೧೦ ಮಂದಿ ಭ್ರಷ್ಟ ಅಧಿಕಾರಿಗಳ ಮನೆ ಹಾಗೂ ಇತರೆಡೆ ಲೋಕಾಯುಕ್ತ ಅಧಿಕಾರಿಗಳು ಮುಂಜಾನೆಯಿಂದಲೇ ಏಕಕಾಲದಲ್ಲಿ ದಾಳಿ ನಡೆಸಿ ನಗದು,ಚಿನ್ನಾಭರಣಗಳು, ವಾಹನಗಳು,ಐಷಾರಾಮಿ ವಸ್ತುಗಳು ಸೇರಿ ಕೋಟ್ಯಂತರ ಮೌಲ್ಯದ ಆಸ್ತಿ ಪಾಸ್ತಿ ಪತ್ತೆ ಹಚ್ಚಿ ಶೋಧ ಕಾರ್ಯ ನಡೆಸಿದ್ದಾರೆ.
ಬೆಂಗಳೂರು ನಗರ, ಬೆಂಗಳೂರು ದಕ್ಷಿಣ,ರಾಯಚೂರು ತುಮಕೂರು, ಕಲಬುರಗಿ,ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳ ಹಲವಡೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು 10 ಮಂದಿ ಭ್ರಷ್ಟರ ಅಕ್ರಮ ಆಸ್ತಿಪಾಸ್ತಿ ದಾಖಲೆಗಳನ್ನು ಪರಿಶೀಲನೆ ಕೈಗೊಂಡಿದ್ದಾರೆ.
ಬಲೆಗೆ ಬಿದ್ದಿರುವ ಅಧಿಕಾರಿಗಳ ಕಚೇರಿ ಮನೆಗಳು,ಸಂಬಂಧಿಕರ ಮನೆಗಳು, ಆಸ್ತಿಗಳ ಮೇಲೆ ನಡೆಸಿದ ದಾಳಿಯಲ್ಲಿ ಆದಾಯ ಮೀರಿ ನೂರಾರು ಪಟ್ಟು ಅಕ್ರಮ ಆಸ್ತಿಪಾಸ್ತಿಯ ದಾಖಲೆ ಪತ್ರಗಳು ದೊರೆತಿದ್ದು, ಅವುಗಳನ್ನು ಪರಿಶೀಲನೆ ನಡೆಸಲಾಗಿದೆ.
