
ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಸಾವು-ಸಿಡಿದೆದ್ದ ಪೋಷಕರು,ಪರಿಸ್ಥಿತಿ ಉದ್ವಿಗ್ನ
ದೇವನಹಳ್ಳಿ(ಬೆಂಗಳೂರು)ಜು.೮: ವಸತಿ ಶಾಲೆಯ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಸಾವು ಕಂಡ ಘಟನೆ
ಬೆಂಗಳೂರು ಉತ್ತರ ತಾಲೂಕಿನಲ್ಲಿ ನಡೆದಿದೆ.

ಗುರುಕಿರಣ್ (12) ಮೃತ ವಿದ್ಯಾರ್ಥಿಯಾಗಿದ್ದು,ಈತ ಉತ್ತರ ತಾಲೂಕಿನ ಕಾಡಯರಪ್ಪನಹಳ್ಳಿ ಗ್ರಾಮದಲ್ಲಿ ಇರುವ ಸ್ಟರ್ಲಿಂಗ್ ಇಂಗ್ಲೀಷ್ ವಸತಿ ಶಾಲೆಯಲ್ಲಿ 6 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಇಂದು ಬೆಳಿಗ್ಗೆ ವಸತಿ ಶಾಲೆ ಆವರಣದಲ್ಲಿ ಕುಸಿದು ಬಿದ್ದ ವಿದ್ಯಾರ್ಥಿ ಗುರುಕಿರಣ್ ನನ್ನು ಶಾಲೆ ಆಡಳಿತ ಮಂಡಳಿಯವರು ಆಸ್ಪತ್ರೆಗೆ ದಾಖಲಿಸಿದ್ದರು.ಜೊತೆಗೆ ಗುರುಕಿರಣ್ ಪೋಷಕರಿಗೂ ಕರೆ ಮಾಡಿ ಮಾಹಿತಿ ನೀಡಿದ್ದರು.ಆದರೆ ಪೋಷಕರು ಬರುವಷ್ಟರಲ್ಲೇ ವಿದ್ಯಾರ್ಥಿ ಸಾವು ಕಂಡಿದ್ದಾನೆನ್ನಲಾಗಿದೆ.
ಇನ್ನು ಶಾಲೆಯ ದೈಹಿಕ ಶಿಕ್ಷಕ ನಾರಾಯಣ ಹಲ್ಲೆ ನಡೆಸಿದ್ದರಿಂದಲೇ ತಮ್ಮ ಪುತ್ರ ಸಾವು ಕಂಡಿದ್ದಾನೆ ಎಂದು ಗುರುಕಿರಣ್ ಪೋಷಕರು ಹಾಗೂ ಸಂಬಂಧಿಕರು ಆರೋಪಿಸಿದ್ದಾರೆ. ಅಲ್ಲದೆ, ಪೊಲೀಸರ ಎದುರಲ್ಲೇ ಶಿಕ್ಷಕ ನಾರಾಯಣ ಮೇಲೆ ಹಲ್ಲೆ ನಡೆಸಿ ಆತನನ್ನು ಸುಟ್ಟು ಹಾಕುವುದಾಗಿ ಪೆಟ್ರೋಲ್ ತಂದಿದ್ದರು. ತಕ್ಷಣ ಬಾಗಲೂರು ಪೊಲೀಸರು, ನಾರಾಯಣನನ್ನು ರಕ್ಷಿಸಿ ಜೀಪ್ನಲ್ಲಿ ಕೂರಿಸಿದ್ದಾರೆ.ಆದರೂ ಸುಮ್ಮನಾಗದ ಪೋಷಕರು, ಮತ್ತೆ ಹಲ್ಲೆಗೆ ಮುಂದಾಗಿದ್ದರು. ಇದರಿಂದ ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.ಹೀಗಾಗಿ ಕೂಡಲೇ ಕಾರ್ಯಾಪ್ರವೃತ್ತರಾದ ಪೊಲೀಸರು ಪರಿಸ್ಥಿತಿ ತಹಬದಿಗೆ ತಂದರು.

ಈ ನಡುವೆ ಪೊಲೀಸರು ಮನವೊಲಿಸಿದರೂ ಸಮಾಧಾನಗೊಳ್ಳದ ವಿದ್ಯಾರ್ಥಿ ಪೋಷಕರು, ಪೊಲೀಸ್ ವಾಹನಕ್ಕೆ ಅಡ್ಡಲಾಗಿ ಕುಳಿತು ಧರಣಿ ನಡೆಸಿ ನಾರಾಯಣನನ್ನು ತಮ್ಮ ವಶಕ್ಕೆ ನೀಡುವಂತೆ ಬಿಗಿಪಟ್ಟು ಹಿಡಿದಿದ್ದರು.ಹೀಗಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಸ್ಥಳಕ್ಕೆ ದೇವನಹಳ್ಳಿ ಎಸಿಪಿ ಶ್ರೀ ಹರ್ಷ ಹಾಗು ಡಿಸಿಪಿ ಮಿಥುನ್ ಕುಮಾರ್ ದೌಡಾಯಿಸಿ , ಧರಣಿ ನಿರತ ಪೋಷಕರ ಮನವೊಲಿಸುವ ಪ್ರಯತ್ನ ನಡೆಸಿದರು.
