ಬೆಂಗಳೂರಿನ ಬನಶಂಕರಿ ಜಂಕ್ಷನ್ ಅಭಿವೃದ್ಧಿಗೆ ಜಿಬಿಎ ಕ್ರಮ
ಬೆಂಗಳೂರು ಜು.8:ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಬನಶಂಕರಿ ಜಂಕ್ಷನ್ ಅಭಿವೃದ್ಧಿ ಕುರಿತಂತೆ ಎಂದು ಪಾಲಿಕೆ ಆಯುಕ್ತ ಕೆ ಎನ್ ರಮೇಶ್ ವಿವಿಧ ಇಲಾಖೆಗಳ ಅಧಿಕಾರಿಗಳೊಡನೆ ಜಯನಗರದ ಪಾಲಿಕೆ ಸಭಾಂಗಣದಲ್ಲಿ ಸಭೆ ನಡೆಸಿದರು.
ಪಾದಚಾರಿಗಳ ಸುರಕ್ಷತೆಗಾಗಿ ಪಾಲಿಕೆ ವತಿಯಿಂದ ಪಾದಚಾರಿ ಸ್ಕೈ ವಾಕ್ ಕಾಮಗಾರಿಯನ್ನು ಉದ್ದೇಶಿಸಲಾಗಿದ್ದು ಸದರಿ ಕಾಮಗಾರಿಗಾಗಿ ಭೂಮಿ ಪೂಜೆ ಮಾಡಲಾಗಿರುತ್ತದೆ. ಪ್ರಸ್ತುತ ಬಿಸ್ಮೈಲ್ ವತಿಯಿಂದ ಬನಶಂಕರಿ ಜಂಕ್ಷನ್ ನಲ್ಲಿ ಉಂಟಾಗುತ್ತಿರುವ ಸಂಚಾರದಟ್ಟಣೆಯನ್ನು ತಗ್ಗಿಸುವ ಹಿತದೃಷ್ಟಿಯಿಂದ ಫ್ಲೈ ಓವರ್ ಹಾಗೂ ಅಂಡರ್ ಪಾಸ್ ನಿರ್ಮಾಣ ಕಾಮಗಾರಿಯನ್ನು ನಿರ್ಮಿಸಲು ಸಹ ಉದ್ದೇಶಿಸಲಾಗಿರುವುದರಿಂದ ಹಾಲಿ ಸ್ಕೈವಾಕ್ ಕಾಮಗಾರಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿರುತ್ತದೆ. ಆದುದರಿಂದ ಸದರಿ ಕಾಮಗಾರಿಗಳ ಅನುಷ್ಠಾನಗೊಳಿಸಲು ಇರುವಂತಹ ಸಾಧಕ ಬಾಧಕಗಳ ಕುರಿತಂತೆ ಅಧಿಕಾರಿಗಳೊಂದಿಗೆ ಸಮಗ್ರವಾಗಿ ಚರ್ಚಿಸಿದರು.

ವಾಸ್ತುಶಿಲ್ಪಿ ನರೇಶ್ ನರಸಿಂಹನ್ ಮಾತನಾಡಿ,ಬನಶಂಕರಿ ಜಂಕ್ಷನ್ ನಲ್ಲಿ ಪ್ರತಿನಿತ್ಯ ಸಂಚಾರ ಮಾಡುವ ಪಾದಚಾರಿಗಳು ಹಾಗೂ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡುವಂತಹ ಭಕ್ತಾದಿಗಳ ಸಂಚಾರ ಯಥೇಚ್ಛವಾಗಿರುವುದರಿಂದ ಈ ಜಂಕ್ಷನ್ ನಲ್ಲಿ ಪಾದಚಾರಿಗಳ ಸುರಕ್ಷತೆಗಾಗಿ ಸುಸಜ್ಜಿತ ಸ್ಕೈ ವಾಕ್ ಅವಶ್ಯಕತೆ ಇರುತ್ತದೆ. ಪ್ರತ್ಯೇಕ ಬಸ್ ಲೇನ್ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದರಿಂದ ಈ ಜಂಕ್ಷನ್ ಸಂಚಾರ ದಟ್ಟಣೆ ಕಡಿಮೆಗೊಳಿಸಬಹುದೆಂದು ಅಭಿಪ್ರಾಯಪಟ್ಟರು.

ಸಲಹೆಗಾರರು ಮತ್ತು ಪಾಲಿಕೆ ಮುಖ್ಯ ಅಭಿಯಂತರರು ಮಾತನಾಡಿ ಪಾಲಿಕೆ ಮತ್ತು ಬಿಎಂಆರ್‌ಸಿಎಲ್ ಪ್ರಸ್ತುತ ನಡೆಸಿರುವ ಅಧ್ಯಯನಗಳನ್ವಯ ಪಾದಚಾರಿಗಳ ಸುರಕ್ಷತೆಗಾಗಿ ಈ ಜಂಕ್ಷನ್‌ಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳ ತುದಿಗಳನ್ನು ಜೋಡಿಸುವ ಒಂದು ಸ್ಕೈವಾಕ್ ನಿರ್ಮಿಸುವುದು ಅತ್ಯಗತ್ಯವಾಗಿದೆ ಹಾಗೂ ಇದನ್ನು ಮತ್ತಷ್ಟು ಸುಂದರ ಮತ್ತು ಪಾದಚಾರಿ ಸ್ನೇಹಿಯನ್ನಾಗಿ ಮಾಡುವುದು ಬಹಳ ಮುಖ್ಯವಾಗಿದೆ. ಇದು ಪಾದಚಾರಿಗಳಿಗೆ ಸುರಕ್ಷಿತವಾದ ನಡಿಗೆಯ ಹಾದಿಗಳನ್ನು ಕಲ್ಪಿಸುವುದು ಪಾದಚಾರಿಗಳಿಗೆ ಮೊದಲ ಆದ್ಯತೆ ನೀಡಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶಗಳಿಗೂ ಅನುಗುಣವಾಗಿದೆ ಎಂದು ತಿಳಿಸಿದರು.
ಈ ಅಭಿಪ್ರಾಯಗಳನ್ನು ಗಂಭೀರವಾಗಿ ಆಲಿಸಿದ ಆಯುಕ್ತರು ಈ ಎರಡು ಕಾಮಗಾರಿಗಳ ಅವಶ್ಯಕತೆ ಹಾಗೂ ಖರ್ಚು ವೆಚ್ಚಗಳು, ಸಾಧಕ ಬಾದಕಗಳ ಕುರಿತಂತೆ ಸಮಗ್ರವಾಗಿ ಪರಿಶೀಲನೆ ನಡೆಸಿ ಮೇಲಾಧಿಕಾರಿಗಳಿಗೆ ವರದಿ ನೀಡಲಾಗುವುದೆಂದು ತಿಳಿಸಿದರು
