LatestTop Storiesಬೆಂಗಳೂರು-Bengaluruರಾಜಕೀಯ | Politicsರಾಜ್ಯ-Karnataka

ನಾಗೇಂದ್ರ ರಾಜೀನಾಮೆ ವಿಚಾರ -ಆಡಳಿತ, ವಿಪಕ್ಷ ಕೆಸರೆರಚಾಟ

ಬೆಂಗಳೂರು, ಆ. 21- ರಾಜ್ಯದ ಯೋಜನಾ ಮತ್ತು ಸಾಂಖ್ಯಿಕ ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳು ನಡೆಸುತ್ತಿರುವ ಹೋರಾಟ ಈಗ ದಿನದಿಂದ ದಿನಕ್ಕೆ ಒಂದೊಂದು ರೀತಿಯ ಸ್ವರೂಪ ಪಡೆದುಕೊಳ್ಳುತ್ತಿರುವಾಗಲೇ ಪ್ರತಿಪಕ್ಷಗಳಿಗೆ ಸೆಡ್ಡು ಹೊಡೆದು ಆಡಳಿತ ಪಕ್ಷ ಕಾಂಗ್ರೆಸ್ ಸಹ ಹೋರಾಟಕ್ಕೆ ಇಳಿದಿದ್ದು, ಸಚಿವ ನಾಗೇಂದ್ರ ರಾಜೀನಾಮೆ ವಿಚಾರ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಪರಸ್ಪರ ಕೆಸರೆರೆಚಾಟಕ್ಕೆ ಎಡೆ ಮಾಡಿಕೊಟ್ಟಿದೆ.
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಕಳೆದ 4 ದಿನಗಳಿಂದ ಪ್ರತಿಪಕ್ಷಗಳು ಉಭಯ ಸದನಗಳಲ್ಲೂ ಹೋರಾಟ ನಡೆಸಿದ್ದು, ಸದನದ ಹೊರಗೂ ಹೋರಾಟ ನಡೆಸಿರುವ ಬಿಜೆಪಿ ಮತ್ತು ಜೆಡಿಎಸ್ ಇಂದು ಶಾಸಕರ ಭವನದ ಆವರಣದಲ್ಲಿರುವ ವಾಲ್ಮೀಕಿ ಪ್ರತಿಮೆ ಬಳಿ ಧರಣಿ ನಡೆಸಿ ನಾಗೇಂದ್ರರವರ ರಾಜೀನಾಮೆಗೆ ಆಗ್ರಹಿಸಿ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಪುಷ್ಪಾರ್ಚನೆಗೆ ನಡೆಸಿದ ನಂತರ ಅಲ್ಲಿಂದ ವಿಧಾನಸೌಧದವರೆಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕರಾದ ಆರ್. ಅಶೋಕ್ ಹಾಗೂ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನ ಎಲ್ಲಾ ಶಾಸಕರು ಕಾಲ್ನಡಿಗೆ ಜಾಥಾ ನಡೆಸಿದರು.

ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಗಾಂಧಿ ಪ್ರತಿಮೆ ಬಳಿ ಬಿತ್ತಿ ಪತ್ರ ಹಿಡಿದು ಕಾಂಗ್ರೆಸ್ ಹೋರಾಟ

ಬಿಜೆಪಿ-ಜೆಡಿಎಸ್‌ನ ಹೋರಾಟಕ್ಕೆ ಪ್ರತಿಯಾಗಿ ಕಾಂಗ್ರೆಸ್‌ನ ಸಚಿವರು, ಶಾಸಕರು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ಪ್ರತಿಪಕ್ಷ ಶಾಸಕರುಗಳ ಜನವಿರೋಧಿ ಹಾಗೂ ಸದನದ ಘನತೆಗೆ ಧಕ್ಕೆ ತರುವ ನಡವಳಿಕೆಯನ್ನು ಖಂಡಿಸಿ ಪ್ರತಿಭಟನಾ ಧರಣಿ ನಡೆಸಿದರು.
ಸಚಿವ ನಾಗೇಂದ್ರರವರ ರಾಜೀನಾಮೆ ವಿಚಾರ ಈಗ ಪ್ರತಿಪಕ್ಷಗಳು ಮತ್ತು ಆಡಳಿತ ಪಕ್ಷದ ನಡುವೆ ಪರಸ್ಪರ ಕೆಸರೆರೆಚಾಟಕ್ಕೆ ಕಾರಣವಾಗಿ ಸದನದ ಹೊರಗೂ c ಆರಂಭವಾದಂತಾಗಿದೆ.
ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಕಪ್ಪು ಬಣ್ಣದ ಟೀಶರ್ಟ್ ಧರಿಸಿದ್ದರು. ಸಚಿವರ ನಾಗೇಂದ್ರ ರಾಜೀನಾಮೆ ನೀಡಲಿ, ದಲಿತರ ಹಣ ಕಬಳಿಸಿದವರಿಗೆ ಧಿಕ್ಕಾರ ಎಂಬ ಬರಹಗಳನ್ನು ಈ ಟೀಶರ್ಟ್‌ ಗಳು ಹೊಂದಿದ್ದವು. ಕಾಂಗ್ರೆಸ್ ಸಚಿವರು, ಶಾಸಕರು ಸಹ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಗಾಂಧಿ ಪ್ರತಿಮೆ ಬಳಿ ಬಿತ್ತಿ ಪತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು.

Share with Friends
author avatar
Digital Desk