
ಕಪ್ಪು ಟೀ ಶರ್ಟ್ ಧರಿಸಿ ಧರಣಿ : ಮಾರ್ಷಲ್ -ಬಿಜೆಪಿ ಸದಸ್ಯರ ಜಟಾಪಟಿ
ಬೆಂಗಳೂರು, ಆ. 21-ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧದ ಹೊರಗೆ ಕಪ್ಪು ಟೀ ಶರ್ಟ್ ಧರಿಸಿ ಧರಣಿ ನಡೆಸಿದ ಬಿಜೆಪಿ ಸದಸ್ಯರು ವಿಧಾನಸಭೆ ಪ್ರವೇಶಿಸಲು ಮುಂದಾದಾಗ ಮಾರ್ಷಲ್ಗಳು ಕಪ್ಪು ಟೀಶರ್ಟ್ ಧರಿಸಿದ್ದೀರಿ, ಒಳಗೆ ಬಿಡಲ್ಲ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಪ್ರತಿಪಕ್ಷ ಸದಸ್ಯರನ್ನು ತಡೆದಾಗ ಮಾರ್ಷಲ್ಗಳು ಮತ್ತು ಶಾಸಕರುಗಳ ನಡುವೆ ಜಟಾಪಟಿ ನಡೆದು ಮಾರ್ಷಲ್ಗಳನ್ನೆ ತಳ್ಳಿಕೊಂಡು ಬಿಜೆಪಿ ಮತ್ತು ಜೆಡಿಎಸ್ ಶಾಸಕರು ವಿಧಾನಸಭೆಯ ಒಳಗೆ ಬಂದರು.
ಕಪ್ಪು ಟೀ ಶರ್ಟ್ ಧರಿಸಿ ವಿಧಾನಸಭೆಗೆ ಬರುವಂತಿಲ್ಲ. ಕಪ್ಪು ಟೀ ಶರ್ಟ್ ಧರಿಸಿದ್ದ ಶಾಸಕರನ್ನು ತಡೆಯುವ ಮಾರ್ಷಲ್ಗಳ ಪ್ರಯತ್ನ ಸಫವಾಗಲಿಲ್ಲ. ಏರಿದ ಧ್ವನಿಯಲ್ಲೇ ಬಿಜೆಪಿ ಸದಸ್ಯರುಗಳು ಮಾರ್ಷಲ್ಗಳನ್ನು ದಬಾಯಿಸಿ ವಿಧಾನಸಭೆಯ ಒಳಗೆ ಬಂದರು.
ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿ, ಪ್ರತಿಪಕ್ಷಗಳ ವಿರುದ್ಧ ಆಡಳಿತ ಪಕ್ಷದವರು ನಡೆಸಿರುವ ಧರಣಿಯನ್ನು ಗೇಲಿ ಮಾಡಿ, ಎಂದೂ ಆಡಳಿತ ಪಕ್ಷದವರು ಧರಣಿ ನಡೆಸಿದ ಉದಾಹರಣೆ ಇಲ್ಲ ಎಂದು ಲೇವಡಿ ಮಾಡಿದರು.
ಪ್ರತಿಪಕ್ಷಗಳ ಹೋರಾಟದಿಂದ ದಿಕ್ಕು ತೋಚದಂತಾಗಿರುವ ಆಡಳಿತ ಪಕ್ಷ ಕಾಂಗ್ರೆಸ್ ಸದಸ್ಯರು ಧರಣಿ ನಡೆಸುತ್ತಿರುವುದು ಹಾಸ್ಯಾಸ್ಪದ ಎಂದು ಅವರು ಹೇಳಿದರು.
