
ಮೈಸೂರು ದಸರಾ: 22 ಸಚಿವರ ನೇಮಕಕ್ಕೆ ಛಲವಾದಿ ವ್ಯಂಗ್ಯ
ಮೈಸೂರು.ಸೆ.29 – ಮೈಸೂರು ದಸರಾ ಯಶಸ್ವಿಯಾಗಿ ನಡೆಸುವ ಉದ್ದೇಶದಿಂದ ೨೨ ಸಚಿವರನ್ನು ನೇಮಿಸುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿರ್ಧಾರವನ್ನು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರಾಗಿ ಯತೀಂದ್ರ ಸಿದ್ದರಾಮಯ್ಯಗೆ ಯಾವ ಅಧಿಕಾರವಿದೆ.ಯತೀಂದ್ರ ಸಿದ್ದರಾಮಯ್ಯ ವಯಸ್ಸು ಕಡಿಮೆ ಎಂಬ ಕಾರಣಕ್ಕೆ ಸಚಿವರನ್ನು ದಸರಾ ಉಸ್ತುವಾರಿ ಕಾರ್ಯಕ್ಕೆ ನಿಯೋಜಿಸಲಾಗಿದೆಯೇ ಎಂದು ವ್ಯಂಗ್ಯವಾಡಿದರು.
ಯತೀAದ್ರ ಸಿದ್ದರಾಮಯ್ಯಗೆ ತಮ್ಮ ಹೊಸ ಮನೆಯಲ್ಲಿ ಸಾಮಾನುಗಳನ್ನು ಜೋಡಿಸಿಕೊಳ್ಳಲೂ ಸಮಯವಿಲ್ಲ. ಹೀಗಾಗಿ ಮಾವುತರ ಉಪಹಾರ ಕೂಟಕ್ಕೆ ತಡವಾಗಿ ಬಂದೆ ಎಂದು ಅವರೇ ಹೇಳಿದ್ದಾರೆ. ಅವರು ಮೊದಲು ಮನೆಯ ಸಾಮಾನುಗಳನ್ನು ಜೋಡಿಸಿಕೊಳ್ಳಲಿ ಎಂದು ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.
ಎಸ್ಐಆರ್ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ :
ದೇಶದಲ್ಲಿ ನಡೆಯುತ್ತಿರುವ ಎಸ್ಐಆರ್ಕುರಿತು ಕಾಂಗ್ರೆಸ್ ಮಾಡುತ್ತಿರುವ ವಿರೋಧವನ್ನು ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.ಎಸ್ಐಆರ್ ಯಾವುದೇ ಪಕ್ಷಕ್ಕೆ ಸಂಬಂಧಿಸಿದ ವಿಚಾರವಲ್ಲ, ದೇಶದ ಚುನಾವಣಾ ವ್ಯವಸ್ಥೆಗೆ ಸಂಬಂಧಿಸಿದ ವಿಷಯ ಎಂದು ಹೇಳಿದರು.
ಈ ಹಿಂದೆ ಕಾಂಗ್ರೆಸ್ ಆಡಳಿತದಲ್ಲಿಯೂ ಎಸ್ಐಆರ್ ನಡೆದಿತ್ತು. ಆಗ ಯಾವುದೇ ತಕರಾರು ವ್ಯಕ್ತವಾಗಿರಲಿಲ್ಲ ಎಂದು ಪ್ರತಿಪಾದಿಸಿದರು. ಎಸ್ಐಆರ್ನಿಂದ ಅಕ್ರಮ ಅಥವಾ ಬೋಗಸ್ ಮತಗಳು ತೆಗೆದುಹೋಗುವ ಆತಂಕ ಕಾಂಗ್ರೆಸ್ಗೆ ಇದೆ ಎಂದು ಆರೋಪಿಸಿದರು.
ವಿದೇಶಿ ಪ್ರಜೆಗಳು ಮತದಾರರಾಗಿದ್ದರೆ ಅವರನ್ನು ಮತದಾರರ ಪಟ್ಟಿಯಲ್ಲಿ ಉಳಿಸಬೇಕೇ ಎಂದು ಪ್ರಶ್ನಿಸಿದ ಅವರು, ಮತದಾರರ ಪಟ್ಟಿಯ ಶುದ್ಧೀಕರಣ ಅಗತ್ಯವಿದೆ ಎಂದು ಹೇಳಿದರು.
ಕಾಂಗ್ರೆಸ್ ಗೆಲುವು ಸಾಧಿಸಿರುವ ರಾಜ್ಯಗಳಲ್ಲೂ ವೋಟ್ ಚೋರಿ ನಡೆದಿತ್ತೇ ಎಂದು ಪ್ರಶ್ನಿಸಿದ ಛಲವಾದಿ ನಾರಾಯಣಸ್ವಾಮಿ,ಈ ದೇಶದಲ್ಲಿ ವೋಟ್ ಚೋರಿ ಆಗುತ್ತಿಲ್ಲ; ಜನರು ಕಳ್ಳರಿಗೆ ಮತ ಹಾಕುತ್ತಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಎಸ್ಐಆರ್ ಮೂಲಕ ಬೋಗಸ್ ಮತಗಳು ತೆಗೆದುಹಾಕಲ್ಪಡುತ್ತವೆ ಎಂಬ ಆತಂಕದಿAದ ಕಾಂಗ್ರೆಸ್ ಅದನ್ನು ವಿರೋಧಿಸುತ್ತಿದೆ ಎಂದು ಅವರು ಆರೋಪಿಸಿದರು. ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ಮಾಡುತ್ತಿರುವ ಟೀಕೆಯನ್ನೂ ಅವರು ಪ್ರಶ್ನಿಸಿದರು.
ಪಾಕಿಸ್ತಾನದ ವಿರುದ್ಧ ಕ್ರಮ :
ಭಾರತ ಇಂದು ಬಲಿಷ್ಠವಾಗಿ ಬೆಳೆದಿದೆ. ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುವ ಶಕ್ತಿ ಭಾರತಕ್ಕಿದೆ. ಇದು ಪ್ರಧಾನಿ ನರೇಂದ್ರ ಮೋದಿ ಸಾಧನೆ ಎಂದು ಹೇಳಿದರು.
ಸರ್ಕಾರದ ವಿರುದ್ಧ ಆರೋಪ :
ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದ್ದರೂ ಸರ್ಕಾರ ಸಮರ್ಪಕವಾಗಿ ಸ್ಪಂದಿಸಿಲ್ಲ.ರೈತರಿಗೆ ಪ್ರತಿ ಎಕರೆಗೆ ?೨೫ ಸಾವಿರ ಪರಿಹಾರ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿತ್ತು. ಆದರೆ ಸರ್ಕಾರ ೨,೫೦೦ ಮಾತ್ರ ಪರಿಹಾರ ಘೋಷಿಸಿದೆ ಎಂದು ಹೇಳಿದರು.
ಮುಖ್ಯಮಂತ್ರಿ ರೈತನ ಮಗ ಎಂದು ಹೇಳಿಕೊಳ್ಳುತ್ತಾರೆ. ರೈತರ ಮಗನಾಗಿದ್ದರೆ ರೈತರ ಪರವಾಗಿ ನಿಲ್ಲಬೇಕು ಎಂದು ಅವರು ಟೀಕಿಸಿದರು.
ಡಿ.ಕೆ. ಶಿವಕುಮಾರ್ ಹೇಳಿಕೆಗೆ ಆಕ್ಷೇಪ:
ವೀರಶೈವ ಲಿಂಗಾಯತ ಸ್ವಾಮೀಜಿಗಳ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ್ದರೆನ್ನಲಾದ ಹೇಳಿಕೆಗೆ ಛಲವಾದಿ ನಾರಾಯಣಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು.
ರಾಜ್ಯದಲ್ಲಿರುವ ಮಠಗಳ ಸಂಖ್ಯೆ ಎಷ್ಟೇ ಇರಲಿ, ಸ್ವಾಮೀಜಿಗಳು ಸರ್ಕಾರದ ಸೇವೆ ಮಾಡಬೇಕು ಎಂಬ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ.ಈ ಹೇಳಿಕೆಗಾಗಿ ಮುಖ್ಯಮಂತ್ರಿ ಎಲ್ಲ ಸ್ವಾಮೀಜಿಗಳ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಬಿ.ಕೆ. ಹರಿಪ್ರಸಾದ್ ವಿರುದ್ಧ ಟೀಕೆ:
ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ವಿರುದ್ಧವೂ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.
ಗುಜರಾತ್ನಲ್ಲಿ ಕಾಂಗ್ರೆಸ್ ದುರ್ಬಲವಾಗಲು ಬಿ.ಕೆ. ಹರಿಪ್ರಸಾದ್ ಕೊಡುಗೆ ಇದೆ.ರಾಜ್ಯದಲ್ಲಿಯೂ ಕಾಂಗ್ರೆಸ್ ಶೀಘ್ರದಲ್ಲೇ ದುರ್ಬಲವಾಗಲಿದೆ ಎಂದು ಟೀಕಿಸಿದರು.
ಪ್ರಿಯಾಂಕ್ ಖರ್ಗೆ ವಿರುದ್ಧ ಗಂಭೀರ ಆರೋಪ:
ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧವೂ ಛಲವಾದಿ ನಾರಾಯಣಸ್ವಾಮಿ ಹಲವು ಆರೋಪಗಳನ್ನು ಮಾಡಿದರು.ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ.ಕಲ್ಯಾಣ ಕರ್ನಾಟಕ ಭಾಗದಲ್ಲಿ ನಡೆದಿರುವ ಕೊಲೆ ಪ್ರಕರಣಗಳ ಕುರಿತು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಮೇಶ್ ಲಕ್ಕುಂಡಿ ಕೊಲೆ ಸೇರಿದಂತೆ ಆ ಭಾಗದಲ್ಲಿ ನಡೆದಿರುವ ಕೊಲೆ ಪ್ರಕರಣಗಳನ್ನು ಉಲ್ಲೇಖಿಸಿದ ಅವರು, ಗೃಹ ಸಚಿವರು ಈ ವಿಚಾರದಲ್ಲಿ ಏನು ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದರು.ಆರ್ಎಸ್ಎಸ್ ಕುರಿತು ಗೃಹ ಸಚಿವರು ಪದೇಪದೆ ಮಾತನಾಡುವುದನ್ನು ಟೀಕಿಸಿದ ಅವರು,ಬೇರೆಯವರ ಚಡ್ಡಿಯ ಬಗ್ಗೆ ಚಿಂತೆ ಮಾಡುವ ಬದಲು ತಮ್ಮ ಚಡ್ಡಿಯ ಬಗ್ಗೆ ನೋಡಿಕೊಳ್ಳಲಿ. ಗೃಹ ಖಾತೆಯ ಬದಲು ಪ್ರಿಯಾಂಕ್ ಖರ್ಗೆಗೆ ಆರ್ಎಸ್ಎಸ್ ಖಾತೆ ನೀಡಬೇಕು ಎಂದು ಟೀಕಿಸಿದರು.
ಇದೇ ವೇಳೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಪ್ರಿಯಾಂಕ್ ಖರ್ಗೆ ಸಚಿವರಾಗಿದ್ದ ಅವಧಿಯಲ್ಲಿ ಶೌಚಾಲಯ ನಿರ್ಮಾಣ ಮಾಡದೆ ಬಿಲ್ ಮಾಡಿರುವ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದರು. ಪ್ರಸ್ತುತ ಗೃಹ ಇಲಾಖೆಯಲ್ಲೂ ಪೊಲೀಸ್ ವರ್ಗಾವಣೆಗಳಲ್ಲಿ ಲಂಚ ನಡೆಯುತ್ತಿರುವ ಬಗ್ಗೆ ಮಾಹಿತಿ ಇದೆ ಎಂದು ದೂರಿದರು.
