
ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮನವರ 11ನೇ ದಿನದ ಉತ್ತರ ಕ್ರಿಯೆಗೆ ಬೃಹತ್ ಸಿದ್ಧತೆ..!
ಹಾಸನ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ದಿ. ಚೆನ್ನಮ್ಮ ಅವರ 11ನೇ ದಿನದ ಉತ್ತರ ಕ್ರಿಯಾದಿ ಕಾರ್ಯಕ್ಕೆ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಬೆಟ್ಟದ ರಂಗನಾಥಸ್ವಾಮಿ ತಪ್ಪಲಿನಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಜು. 18ರಂದು ಅಸುನೀಗಿದ್ದ ಚೆನ್ನಮ್ಮ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಇದೇ ಮಾವಿನಕೆರೆ ಬೆಟ್ಟದ ರಂಗನಾಥಸ್ವಾಮಿ ತಪ್ಪಲಿನಲ್ಲಿ ನೆರವೇರಿಸಲಾಗಿತ್ತು. ಇದೀಗ ಅವರ ಸಮಾಧಿ ಸ್ಥಳದಲ್ಲೇ ಉತ್ತರ ಕ್ರಿಯಾದಿ ಕಾರ್ಯವನ್ನು ಅಚ್ಚುಕಟ್ಟಾಗಿ ನಡೆಸಲು ಕುಟುಂಬಸ್ಥರು ಮತ್ತು ಕಾರ್ಯಕರ್ತರು ಸಜ್ಜಾಗಿದ್ದಾರೆ.
11ನೇ ದಿನದ ಕಾರ್ಯಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಕ್ಕೂ ಅಧಿಕ ಅಭಿಮಾನಿಗಳು ಮತ್ತು ಸಾರ್ವಜನಿಕರು ಆಗಮಿಸುವ ನಿರೀಕ್ಷೆಯಿದೆ. ಹೀಗಾಗಿ ಸಂಚಾರ, ಪಾರ್ಕಿಂಗ್, ಊಟ-ತಿಂಡಿ ಮತ್ತು ಭದ್ರತಾ ವ್ಯವಸ್ಥೆಗೆ ವಿಶೇಷ ಗಮನ ನೀಡಲಾಗಿದೆ.
ಈ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, “ತಾಯಿ ನಮ್ಮನ್ನು ಅಗಲಿದ್ದಾರೆ ಎಂದು ನೆನಸಿಕೊಳ್ಳಲಿಕ್ಕೂ ಸಹ ಸಾಧ್ಯವಿಲ್ಲ. ಅವರು ಇಂದಿಗೂ ನಮ್ಮೊಂದಿಗೇ ಓಡಾಡುತ್ತಿದ್ದಾರೆ ಎಂಬ ಭಾವನೆ ಇದೆ. ತಾಯಿ ಭೂಮಿ ತಾಯಿಯ ಮಡಿಲು ಸೇರಿದ್ದರೂ, ಅವರು ನನ್ನ ಹೃದಯದಲ್ಲಿ ಸದಾ ಇರುತ್ತಾರೆ. ನನ್ನ ಬಳಿಗೆ ಬರುವ ಸಂಕಷ್ಟದಲ್ಲಿರುವವರಲ್ಲಿ ನಾನು ತಾಯಿಯನ್ನು ಕಾಣುತ್ತೇನೆ ಮತ್ತು ಅವರ ಕಷ್ಟಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ” ಎಂದು ಭಾವುಕರಾಗಿ ಹೇಳಿದರು.
ಅಂತ್ಯಕ್ರಿಯೆ ನಡೆದಂತೆಯೇ ಉತ್ತರ ಕ್ರಿಯಾದಿ ಕಾರ್ಯವೂ ಅಚ್ಚುಕಟ್ಟಾಗಿ ನಡೆಯಬೇಕು ಎಂದು ಎಲ್ಲಾ ರೀತಿಯ ಎಚ್ಚರಿಕೆ ವಹಿಸಲಾಗಿದೆ. ಎಷ್ಟೇ ಜನರು ಬಂದರೂ ಅನ್ನ ಸಂತರ್ಪಣೆಗೆ ಯಾವುದೇ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ಅಭಿಮಾನಿಗಳು ಮತ್ತು ಸಾರ್ವಜನಿಕರು ಶಾಂತ ರೀತಿಯಲ್ಲಿ ಸಹಕರಿಸುವ ಮೂಲಕ ಚೆನ್ನಮ್ಮನವರ ಆತ್ಮಕ್ಕೆ ಶಾಂತಿ ಕೋರಬೇಕು ಎಂದು ಅವರು ಮನವಿ ಮಾಡಿದರು.
