
ನಿಡಗುಂದಿ ಬೇನಾಳ ಎನ್ ಹೆಚ್ ಗ್ರಾಮದಲ್ಲಿ ಪಡಿತರ ಅಕ್ಕಿ ವಿತರಣೆಯಲ್ಲಿ ಭ್ರಷ್ಟಾಚಾರ..!
ವಿಜಯಪುರ: ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬೇನಾಳ ಎನ್ ಹೆಚ್ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಅಕ್ಕಿ ವಿತರಣೆಯಲ್ಲಿ ಭಾರಿ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ. ಪ್ರತಿ ರೇಷನ್ ಕಾರ್ಡ್‌ಗೆ ಅಕ್ಕಿ ನೀಡುವಾಗ 10 ರೂಪಾಯಿ ಹಣ ವಸೂಲಿ ಮಾಡಲಾಗುತ್ತಿದೆ ಮತ್ತು ಪ್ರತಿ ಕಾರ್ಡ್‌ಗೆ 1 ಕೆಜಿ ಅಕ್ಕಿಯಲ್ಲಿ ಕನ್ನ ಹಾಕಲಾಗುತ್ತಿದೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಗ್ರಾಮಸ್ಥರಿಂದ ದೂರು ಬಂದ ಹಿನ್ನೆಲೆಯಲ್ಲಿ ನಮ್ಮ ಸುದ್ದಿವಾಹಿನಿಯ ತಂಡವು ಅಪರಿಚಿತರಂತೆ ಗ್ರಾಮಕ್ಕೆ ತೆರಳಿ ಅಲ್ಲಿ ನಡೆಯುತ್ತಿರುವ ಅನ್ಯಾಯವನ್ನು ಪ್ರತ್ಯಕ್ಷವಾಗಿ ದೃಶ್ಯಾವಳಿಗಳ ಮೂಲಕ ಸೆರೆಹಿಡಿದಿದೆ. ವಿಡಿಯೋದಲ್ಲಿ ಪ್ರತಿ ತಿಂಗಳು ಪಡಿತರ ಅಕ್ಕಿ ಹಂಚಿಕೆ ಮಾಡುವ ಸಮಯದಲ್ಲಿ ನಿಗದಿತ ಸಮಯಕ್ಕೆ ಅಕ್ಕಿ ನೀಡದೇ, ಬರುವ ಫಲಾನುಭವಿಗಳಿಂದ 10 ರೂಪಾಯಿ ಹಣ ಪಡೆಯುತ್ತಿರುವುದು ಕಂಡುಬಂದಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ನಿಯಮಗಳ ಪ್ರಕಾರ ಪಡಿತರವನ್ನು ಸಂಪೂರ್ಣ ಉಚಿತವಾಗಿ ನೀಡಬೇಕು. ಆದರೆ ಇಲ್ಲಿನ ನ್ಯಾಯಬೆಲೆ ಅಂಗಡಿ ಮಾಲೀಕರು ನಿಯಮಗಳನ್ನು ಗಾಳಿಗೆ ತೂರಿ ಕಾನೂನು ಬಾಹಿರ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
“ನಮಗೆ ಸಿಗಬೇಕಾದ ಅಕ್ಕಿಯಲ್ಲೂ ಕಡಿತ ಮಾಡುತ್ತಾರೆ. ಕೇಳಿದರೆ ಸರಿಯಾಗಿ ಮಾತನಾಡುವುದಿಲ್ಲ. ಬಡವರ ಪಡಿತರದಲ್ಲೂ ಹಣ ಮಾಡುತ್ತಿದ್ದಾರೆ” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಕೂಡಲೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ತನಿಖೆ ನಡೆಸಿ, ಪಡಿತರ ಅಕ್ಕಿಗೆ ಕನ್ನ ಹಾಕಿರುವ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅಲ್ಲದೆ ಬೇರೆಡೆ ಕೂಡ ಇಂತಹ ಅಕ್ರಮ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕೆಂದು ಮನವಿ ಮಾಡಿದ್ದಾರೆ.
