Top Storiesಯಾದಗಿರಿ

2.12 ಕೋಟಿ ಪರಿಹಾರ ನೀಡದಕ್ಕೆ ಯಾದಗಿರಿ ನಗರಸಭೆ ಸಾಮಗ್ರಿಗಳ ಜಪ್ತಿ..!

ಯಾದಗಿರಿ: ನಿವೇಶನದ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಸರಸ್ವತಿಗೆ 2.12 ಕೋಟಿ ರೂಪಾಯಿ ಪರಿಹಾರ ಹಣ ಪಾವತಿ ಮಾಡದ ಹಿನ್ನೆಲೆಯಲ್ಲಿ ಯಾದಗಿರಿ ನಗರಸಭೆ ಕಚೇರಿಯ ಸಾಮಗ್ರಿಗಳನ್ನು ಕೋರ್ಟ್ ಆದೇಶದ ಮೇರೆಗೆ ಜಪ್ತಿ ಮಾಡಲಾಗಿದೆ. ಇದರಿಂದ ನಗರಸಭೆ ಕಚೇರಿಯ ದಿನನಿತ್ಯದ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡು ಸಾರ್ವಜನಿಕರು ಪರದಾಡುವಂತಾಗಿದೆ.

ಕೋರ್ಟ್ ವಾರಂಟ್ ಹಿನ್ನೆಲೆಯಲ್ಲಿ ಅಧಿಕಾರಿಗಳು ನಗರಸಭೆ ಕಚೇರಿಯಲ್ಲಿದ್ದ ಕುರ್ಚಿ, ಟೇಬಲ್, ಕಂಪ್ಯೂಟರ್, ಸಿಸಿ ಕ್ಯಾಮರಾ ಸೇರಿದಂತೆ ಪ್ರಮುಖ ವಸ್ತುಗಳನ್ನು ಲಾರಿಯಲ್ಲಿ ತುಂಬಿಕೊಂಡು ಹೋಗಿದ್ದಾರೆ. ಸಾಮಗ್ರಿಗಳ ಜಪ್ತಿಯಿಂದ ಕಚೇರಿ ಸಂಪೂರ್ಣ ಖಾಲಿಯಾಗಿದೆ.

ಕುಳಿತುಕೊಳ್ಳಲು ಕುರ್ಚಿಯೇ ಇಲ್ಲದೇ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಕಚೇರಿಯ ನೆಲದ ಮೇಲೆ ಕುಳಿತು ಮೊಬೈಲ್ ಮೂಲಕ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಸ್ತಿ ಖಾತಾ, ಮೊಟೇಷನ್, ತೆರಿಗೆ ಪಾವತಿ, ಎಸ್‌ಐಆರ್ ಸೇರಿದಂತೆ ಯಾವುದೇ ಆನ್‌ಲೈನ್ ಸೇವೆಗಳು ಕಂಪ್ಯೂಟರ್ ಇಲ್ಲದೇ ಸ್ಥಗಿತಗೊಂಡಿವೆ.

212 ಕೋಟಿ ಪರಿಹಾರ ನೀಡದಕ್ಕೆ ಯಾದಗಿರಿ ನಗರಸಭೆ ಸಾಮಗ್ರಿಗಳ ಜಪ್ತಿ

ಇದರಿಂದ ತೆರಿಗೆ ಕಟ್ಟಲು, ಆಸ್ತಿ ಖಾತಾ ಮಾಡಿಸಿಕೊಳ್ಳಲು ಬಂದ ನೂರಾರು ಸಾರ್ವಜನಿಕರು ಗಂಟೆಗಟ್ಟಲೆ ಕಾದು ವಾಪಸ್ ಹೋಗುವಂತಾಗಿದೆ. “ಸರ್ಕಾರದ ಕೆಲಸಕ್ಕಾಗಿ ಬಂದರೆ ಇಲ್ಲಿ ಕುರ್ಚಿ, ಕಂಪ್ಯೂಟರ್ ಇಲ್ಲ. ಯಾರನ್ನು ಕೇಳಬೇಕು” ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

2002 ರಲ್ಲಿ ನಿವೇಶನ ಕಳೆದುಕೊಂಡಿದ್ದ ಸಂತ್ರಸ್ತೆ ಸರಸ್ವತಿ ಅವರಿಗೆ ಪರಿಹಾರ ನೀಡುವಂತೆ ಕೋರ್ಟ್ ಈ ಹಿಂದೆ ಆದೇಶ ನೀಡಿತ್ತು. ಆದರೆ ನಗರಸಭೆ ಪರಿಹಾರ ಪಾವತಿ ಮಾಡದ ಕಾರಣ ಕೋರ್ಟ್ ಸಾಮಗ್ರಿಗಳ ಜಪ್ತಿಗೆ ಆದೇಶಿಸಿದೆ ಎಂದು ತಿಳಿದುಬಂದಿದೆ.

ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರ ಸೇವೆ ಸ್ಥಗಿತವಾಗದಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ನಾಗರಿಕರು ಆಗ್ರಹಿಸಿದ್ದಾರೆ.

Share with Friends
author avatar
Digital Desk