ಕೋಲಾರ : ಇಬ್ಬರು ಮಕ್ಕಳ ಕೊಂದು ತ್ಮಹತ್ಯೆಗೆ ಶರಣಾದ ತಾಯಿ
ಕೋಲಾರ: ಇಬ್ಬರು ಮಕ್ಕಳನ್ನು ಕೊಂದು ಹಾಕಿದ ತಾಯಿ ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಜಿಎಫ್ ತಾಲೂಕಿನ ಕಮ್ಮಸಂದ್ರ ಗ್ರಾಮದಲ್ಲಿ ನಡೆದಿದೆ.ತಿಪ್ಪಮ್ಮ ಎಂಬ ಮಹಿಳೆಯು ತನ್ನ ಇಬ್ಬರು ಮಕ್ಕಳ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಲ್ಲದೇ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಹೆತ್ತ ತಾಯಿಯಿಂದಲೇ ಕೊಲೆಯಾದ ಮೃತ ದುರ್ದೈವಿ ಮಕ್ಕಳನ್ನು ಮೌನೀಶ (7) ಮತ್ತು ನಿತಿನ್ (4) ಎಂದು ಗುರುತಿಸಲಾಗಿದ್ದು, 30 ವರ್ಷದ ತಿಪ್ಪಮ್ಮ ಎಂಬ ಮಹಿಳೆ ಮಕ್ಕಳನ್ನ ಕೊಂದು ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ಎಂಟು ವರ್ಷಗಳ ಹಿಂದೆ ಇವರ ಮದುವೆಯಾಗಿತ್ತು. ದಂಪತಿಗೆ 7 ವರ್ಷದ ಮೌನಿಶ್ ಹಾಗೂ 4 ವರ್ಷದ ನಿತಿನ್ ಎಂಬಿಬ್ಬರು ಮಕ್ಕಳಿದ್ದರು. ಆಗಾಗ ಗಂಡ-ಹೆಂಡತಿ ನಡುವೆ ಗಲಾಟೆಯಾಗುತ್ತಿತ್ತು ಎಂಬ ಸ್ಥಳೀಯರ ಹೇಳಿಕೆ ಮೇರೆಗೆ ಗಂಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಬೆಮೆಲ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
