
ಕರುನಾಡ ಚಕ್ರವರ್ತಿ ಶಿವಣ್ಣನಿಂದ ಮತ್ತೊಂದು ಪ್ಯಾನ್-ಇಂಡಿಯಾ ಸಿನಿಮಾಗೆ ಗ್ರೀನ್ ಸಿಗ್ನಲ್ – ಟೈಟಲ್ ರಿವೀಲ್ ಆಗಿದ್ದು ‘ಕೂರ್ಮಾವತಾರ್’
ಬೆಂಗಳೂರು: ಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್ ಮತ್ತೊಂದು ಪ್ಯಾನ್-ಇಂಡಿಯಾ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಶ್ರೀ ಮಹಾವಿಷ್ಣುವಿನ ಎರಡನೇ ಅವತಾರವಾದ ‘ಕೂರ್ಮಾವತಾರ’ ದ ಕಥಾಹಂದರವನ್ನು ಆಧರಿಸಿ ಸಿದ್ಧವಾಗುತ್ತಿರುವ ಈ ಮಹತ್ವಾಕಾಂಕ್ಷೆಯ ಚಿತ್ರಕ್ಕೆ ‘ಕೂರ್ಮಾವತಾರ್’ ಎಂದು ನಾಮಕರಣ ಮಾಡಲಾಗಿದ್ದು, ಚಿತ್ರತಂಡ ಅಧಿಕೃತ ಟೈಟಲ್ ರಿವೀಲ್ ಟೀಸರ್ ಬಿಡುಗಡೆ ಮಾಡಿದೆ.
ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಕೂರ್ಮಾವತಾರದ ಹಿನ್ನೆಲೆಯನ್ನು ಒಳಗೊಂಡ ಕಥೆಯನ್ನು ಪ್ರಧಾನವಾಗಿಟ್ಟುಕೊಂಡು ನಿರ್ಮಾಣವಾಗುತ್ತಿರುವ ಮೊದಲ ಸಿನಿಮಾ ಇದಾಗಿದೆ ಎಂಬುದು ವಿಶೇಷ. ಇದೇ ಕಾರಣಕ್ಕೆ ಚಿತ್ರದ ಮೇಲೆ ಭಾರಿ ನಿರೀಕ್ಷೆ ಹುಟ್ಟಿಕೊಂಡಿದೆ.
ಈಗಾಗಲೇ ಬಿಡುಗಡೆಯಾಗಿರುವ ಟೈಟಲ್ ಟೀಸರ್ ಪ್ರೇಕ್ಷಕರಲ್ಲಿ ಮತ್ತು ಶಿವಣ್ಣನ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಸಮುದ್ರ ಮಂಥನದ ವಿಷುಯಲ್ ಜೊತೆಗೆ ಶಿವಣ್ಣನ ಗಂಭೀರ ಧ್ವನಿ ಇರುವ ಟೀಸರ್ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಚಿತ್ರದಲ್ಲಿ ಶಿವರಾಜ್ಕುಮಾರ್ ಅವರಲುಕ್ ಹೇಗಿರಲಿದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪೌರಾಣಿಕ ಹಿನ್ನೆಲೆಯ ಈ ಪ್ಯಾನ್-ಇಂಡಿಯಾ ಸಿನಿಮಾ ಶಿವಣ್ಣನ ಸಿನಿ ಕೆರಿಯರ್ನಲ್ಲೇ ಅತ್ಯಂತ ದೊಡ್ಡ ಬಜೆಟ್ ಸಿನಿಮಾವಾಗಲಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.ಚಿತ್ರದ ನಿರ್ದೇಶಕರು ಮತ್ತು ಉಳಿದ ತಾರಾಬಳಗದ ಬಗ್ಗೆ ಶೀಘ್ರದಲ್ಲೇ ಅಧಿಕೃತ ಮಾಹಿತಿ ದೊರಕಲಿದೆ.
