
ಹಿರಿಯೂರು ಉಪ ಚುನಾವಣೆಗೆ ಜೆಡಿಎಸ್ ಭರ್ಜರಿ ಸಿದ್ಧತೆ
ಬೆಂಗಳೂರು,ಜು.9 : ಮಂಡ್ಯ ಜಿಲ್ಲೆಯ ರೈತರ ಬೆಳೆಗಳು ಒಣಗುತ್ತಿದ್ದು, ತಕ್ಷಣವೇ ನೀರು ಬಿಡಬೇಕು ಎಂದು ಮಂಡ್ಯ ಸಂಸದರಾಗಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಆರ್‌ಎಸ್ ಜಲಾಶಯದಲ್ಲಿ ನೀರಿಲ್ಲ ಏನೋ ಕಾರಣಕ್ಕೆ ರೈತರ ಬೆಳೆಗಳಿಗೆ ನೀರು ಬಿಟ್ಟಿರಲಿಲ್ಲ. ಈಗ ಜಲಾಶಯಕ್ಕೆ ನೀರು ಹರಿದು ಬರುತ್ತಿದ್ದು ಬೆಳೆಗಳಿಗೆ ನೀರು ಹರಿಸುವ ಅಗತ್ಯ ಇದೆ ಎಂದರು.
ರೈತರ ಹಿತವನ್ನು ಕಡೆಗಣಿಸುವ ಅಗತ್ಯ ಇಲ್ಲ.ಜಲಾಶಯ ತುಂಬಿದ ಮೇಲೆ ತಮಿಳುನಾಡಿಗೆ ನೀರು ಬಿಟ್ಟರೆ ಆಯಿತು. ಜಲಾಶಯ ತುಂಬಿದ ಮೇಲೆ ಹೆಚ್ಚುವರಿ ನೀರೆಲ್ಲಾ ಅವರಿಗೆ ಹರಿದು ಹೋಗುತ್ತದೆ. ಈಗ ತುರ್ತಾಗಿ ನಾಲೆಗಳಿಗೆ ನೀರು ಹರಿಸಬೇಕು ಎಂದು ಸಚಿವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಈ ಬಗ್ಗೆ ನಾನು ಮಂಡ್ಯ ಜಿಲ್ಲಾಧಿಕಾರಿ ಜತೆಯಲ್ಲಿ ದೂರವಾಣಿ ಮೂಲಕ ಮಾತನಾಡಿದ್ದೇನೆ.ಜಲಾಶಯಕ್ಕೆ ಬರುತ್ತಿರುವ ನೀರಿನಲ್ಲಿ ರೈತರಿಗೆ ಆಗುವಷ್ಟು ನೀರನ್ನು ನಾಲೆಗಳಿಗೆ ಹರಿಸುವಂತೆ ಹೇಳಿದ್ದೇನೆ. ಭತ್ತ, ಕಬ್ಬು ಸೇರಿ ಎಲ್ಲಾ ಬೆಳೆಗಳು ಒಣಗುತ್ತಿವೆ. ಕೂಡಲೇ ನೀರು ಬಿಡಿ ಎಂದು ಹೇಳಿದ್ದೇನೆ ಎಂದು ಹೇಳಿದರು.
ಕಾವೇರಿ ನೀರಿನ ಬಗ್ಗೆ ತಮಿಳುನಾಡಿನ ತಗಾದೆ ಅನಗತ್ಯ. ಪರಸ್ಪರ ಸಹೋದರ ಭಾವದಿಂದ ವರ್ತಿಸಬೇಕು. ಅಲ್ಲಿನ ರಾಜಕೀಯ ಪಕ್ಷಗಳು ಈ ಬಗ್ಗೆ ರಾಜಕೀಯ ಮಾಡುವುದು ಕೂಡ ಬೇಕಿಲ್ಲ. ನಾವು ಸಹೋದರರು ಎನ್ನುವುದನ್ನು ಅಲ್ಲಿನವರು ಮರೆಯಬಾರದು ಎಂದು ತಿಳಿಸಿದರು.
ಇನ್ನು ಹಿರಿಯೂರು ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ನಮ್ಮ ಪಕ್ಷದಲ್ಲಿ ಒತ್ತಡ ಇದೆ. ಈ ಬಗ್ಗೆ ಬಿಜೆಪಿ ಉನ್ನತ ನಾಯಕರ ಜತೆ ಚರ್ಚೆ ನಡೆಸಿದ್ದೇನೆ. ಹಿರಿಯೂರು ಕ್ಷೇತ್ರದ ಮುಖಂಡರ ಜತೆ ಎರಡು ಮೂರು ಸಭೆಗಳನ್ನು ನಡೆಸಿದ್ದೇನೆ. ಸಮಯ ಇದೆ, ನೋಡೋಣ ಎಂದರು.
