LatestTop Storiesರಾಷ್ಟ್ರೀಯ-Nationalವಿದೇಶ-International

ಇರಾನ್ ನಿಂದ ಭೀಕರ ಕ್ಷಿಪಣಿ ದಾಳಿ 6 ಭಾರತೀಯ ಸಾವು, 8 ಮಂದಿಗೆ ಗಾಯ

ಹೊಸದೆಹಲಿ/ಮಸ್ಕತ್.ಜು14: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ತಾರಕಕ್ಕೇರಿದ್ದು, ಹೊರ್ಮುಜ್ ಜಲಸಂಧಿಯಲ್ಲಿ ಯುಎಇ ಧ್ವಜ ಹೊತ್ತ ಎರಡು ಪ್ರಮುಖ ತೈಲ ಟ್ಯಾಂಕರ್‌ಗಳ ಮೇಲೆ ಇರಾನ್ ಪಡೆಗಳು ಕ್ರೂಸ್ ಕ್ಷಿಪಣಿ ದಾಳಿ ನಡೆಸಿವೆ.

ಈ ಭೀಕರ ದಾಳಿಯಲ್ಲಿ ತೈಲ ನೌಕೆಯಲ್ಲಿದ್ದ ಭಾರತೀಯ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದು, 6 ಭಾರತೀಯರು ಸೇರಿ ಒಟ್ಟು 8 ಮಂದಿ ಗಾಯಗೊಂಡಿದ್ದಾರೆ ಎಂದು ಯುಎಇ ರಕ್ಷಣಾ ಸಚಿವಾಲಯ ಅಧಿಕೃತವಾಗಿ ಪ್ರಕಟಿಸಿದೆ.

ಯುಎಇ ಧ್ವಜ ಹೊತ್ತ ತೈಲ ಟ್ಯಾಂಕರ್‌ಗಳ ಮೇಲೆ ಇರಾನ್ ಕ್ಷಿಪಣಿ ದಾಳಿ

ಒಮಾನ್ ಜಲಗಡಿ ವ್ಯಾಪ್ತಿಗೆ ಒಳಪಡುವ ಹಾರ್ಮುಜ್ ಜಲಸಂಧಿಯ ದಕ್ಷಿಣ ಭಾಗದ ಸಮುದ್ರ ಮಾರ್ಗದಲ್ಲಿ ಸಂಚರಿಸುತ್ತಿದ್ದ ಮೊಂಬಾಸಾ ಮತ್ತು ಬಹಿಯಾ ಎಂಬ ಹೆಸರಿನ 2 ವಾಣಿಜ್ಯ ತೈಲ ನೌಕೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಈ ದಾಳಿ ನಡೆಸಿದೆ.

ಮೃತಪಟ್ಟ ನಾವಿಕ ಮೊಂಬಾಸಾ ನೌಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಪ್ರಜೆಯಾಗಿದ್ದಾರೆ. ದಾಳಿಯಲ್ಲಿ ಗಾಯಗೊಂಡಿರುವ ಇತರ 8 ಸಿಬ್ಬಂದಿಗಳಲ್ಲಿ ಆರು ಮಂದಿ ಭಾರತೀಯರು ಹಾಗೂ ಇಬ್ಬರು ಉಕ್ರೇನ್ ಮೂಲದವರಾಗಿದ್ದಾರೆ. ಇವರಲ್ಲಿ ನಾಲ್ಕು ಜನರ ಸ್ಥಿತಿ ಅತ್ಯಂತ ಗಂಭೀರವಾಗಿದ್ದು,ಅವರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಕ್ಷಿಪಣಿ ಅಪ್ಪಳಿಸಿದ ತೀವ್ರತೆಗೆ 2 ನೌಕೆಗಳಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು,ತೀವ್ರ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ಹತೋಟಿಗೆ ತರಲಾಗಿದೆ ಎಂದು ಯುಎಇ ಸಚಿವಾಲಯ ತಿಳಿಸಿದೆ.

ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಯುಎಇ, ಇದು ಜಾಗತಿಕ ಹಡಗು ಸಂಚಾರದ ಮೇಲಿನ ಗಂಭೀರ ದಾಳಿಯಾಗಿದ್ದು, ಅಂತರರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ತನ್ನ ಭೂಪ್ರದೇಶ, ಜನಸಾಮಾನ್ಯರು ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಯುಎಇ ಸೂಕ್ತ ತಿರುಗೇಟು ನೀಡುವ ಹಾಗೂ ಅಗತ್ಯ ಕ್ರಮ ಕೈಗೊಳ್ಳುವ ಸಂಪೂರ್ಣ ಹಕ್ಕನ್ನು ಕಾಯ್ದಿರಿಸಿಕೊಂಡಿದೆ ಎಂದು ಎಚ್ಚರಿಕೆ ನೀಡಿದೆ.

ಅಲ್ಲದೆ, ದೇಶದಾದ್ಯಂತ ಸೇನಾ ಪಡೆಗಳನ್ನು ಹೈ ಅಲರ್ಟ್‌ ನಲ್ಲಿ ಇರಿಸಲಾಗಿದೆ. ವಿಶ್ವದ ಅತ್ಯಂತ ಪ್ರಮುಖ ಸಮುದ್ರ ವ್ಯಾಪಾರ ಮಾರ್ಗಗಳಲ್ಲಿ ಒಂದಾದ ಹೊರ್ಮುಜ್ ಜಲಸಂಧಿಯಲ್ಲಿ ಅಮೆರಿಕ ಮತ್ತುಇರಾನ್ ನಡುವಿನ ಮಿಲಿಟರಿ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ ಈ ದಾಳಿ ನಡೆದಿದೆ.

ಇರಾನ್‌ನ ಹಡಗು ಸಂಚಾರದ ಮೇಲೆ ದಿಗ್ಬಂಧನ ಹೇರಲಾಗುವುದು ಹಾಗೂ ಭದ್ರತಾ ವೆಚ್ಚವಾಗಿ ಶೇ.20ರಷ್ಟು ಸುಂಕ ವಸೂಲಿ ಮಾಡಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು.ಇದರ ಬೆನ್ನಲ್ಲೇ,ಅಮೆರಿಕದ ಸೆಂಟ್ರಲ್ ಕಮಾಂಡ್ ಇರಾನ್ ಸೇನಾ ನೆಲೆಗಳ ಮೇಲೆ ಸರಣಿ ದಾಳಿ ನಡೆಸಿತ್ತು.ಇದಕ್ಕೆ ಪ್ರತಿಯಾಗಿ ಇರಾನ್ ಈ ದಾಳಿ ನಡೆಸಿದೆ .
ಇರಾನ್‌ನ ಸರ್ಕಾರಿ ವಾಹಿನಿ ಐಆರ್‌ಐಬಿ ಅಮೆರಿಕದ ಶತ್ರು ನೌಕೆಯ ಮೇಲೆ ಕ್ರೂಸ್ ಕ್ಷಿಪಣಿ ಉಡಾಯಿಸಿರುವುದಾಗಿ ತಿಳಿಸಿದ್ದು,ಈ ಭಾಗದಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳಲ್ಲಿ ಭೀತಿ ಸೃಷ್ಟಿಯಾಗಿದೆ.

Share with Friends
author avatar
Digital Desk