
120 ಕಿ.ಮೀ. ಚೇಸ್ ಮಾಡಿ ಇಬ್ಬರು ಅಂತರರಾಜ್ಯ ಖದೀಮರನ್ನು ಬಂಧಿಸಿದ ಹುಮನಾಬಾದ್ ಪೊಲೀಸರು
ಬೀದರ್: ಬೀದರ್ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಇಬ್ಬರು ಅಂತರರಾಜ್ಯ ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 120 ಕಿಲೋಮೀಟರ್ ಬೆನ್ನಟ್ಟಿದ ಬಳಿಕ ಹುಮನಾಬಾದ್ ಸಿಪಿಐ ಸಂತೋಷ ತಟ್ಟೆಪಳ್ಳಿ ನೇತೃತ್ವದ ತಂಡ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದೆ.
ಬಂಧಿತ ಆರೋಪಿಗಳು ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಕಳ್ಳತನ ಮತ್ತು ದರೋಡೆ ಸೇರಿದಂತೆ ತಲಾ 55ಕ್ಕೂ ಅಧಿಕ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳಿಂದ ₹54.74 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ₹42.75 ಲಕ್ಷ ಮೌಲ್ಯದ 28.5 ತೊಲೆ ಚಿನ್ನ, ₹44 ಸಾವಿರ ಮೌಲ್ಯದ 22 ತೊಲೆ ಬೆಳ್ಳಿ ಹಾಗೂ ₹5.80 ಲಕ್ಷ ನಗದು ಜಪ್ತಿ ಮಾಡಿದ್ದಾರೆ.
ಪ್ರಕರಣದ ವಿವರಗಳ ಪ್ರಕಾರ, 2026ರ ಮೇ 23ರಂದು ಹುಮನಾಬಾದ್ ಪಟ್ಟಣದ ಶಿವನಗರ ಕಾಲೋನಿಯ ಮೂರು ಮನೆಗಳಲ್ಲಿ ಕಳ್ಳತನ ನಡೆದಿತ್ತು. ಆರೋಪಿಗಳು ಮುಖಕ್ಕೆ ಮಾಸ್ಕ್, ಕೈಗೆ ಹ್ಯಾಂಡ್‌ಗ್ಲೋವ್ಸ್ ಹಾಗೂ ಕಾಲಿಗೆ ಸಾಕ್ಸ್ ಧರಿಸಿ ಕಳ್ಳತನ ಎಸಗಿ ಪರಾರಿಯಾಗಿದ್ದರು. ಅವರ ಓಡಾಟದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ತನಿಖೆಗೆ ಪ್ರಮುಖ ಸುಳಿವಾಗಿತ್ತು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಶಂಕರ್‌ರಾವ್ ಹಾಗೂ ಜಗನ್ನಾಥ್ ಸೇರಿದಂತೆ ಮೂರು ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸಲಾಗಿತ್ತು.
ಬಂಧಿತ ಆರೋಪಿಗಳನ್ನು ವಿಜಯಪುರ ಜಿಲ್ಲೆಯ ಇಂಡಿ ಮೂಲದ ಉಮೇಶ್ ಹಾಗೂ ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಹುಸೇನಿ ಗಾಯಕವಾಡ ಎಂದು ಗುರುತಿಸಲಾಗಿದೆ. ಇವರಿಬ್ಬರ ವಿರುದ್ಧವೂ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ 55ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿವೆ.
ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟೆ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಹುಮನಾಬಾದ್ ಪೊಲೀಸರ ಕಾರ್ಯವನ್ನು ಎಸ್‌ಪಿ ಪ್ರಶಂಸಿಸಿದ್ದು, ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಸಂಪೂರ್ಣ ಮಾಹಿತಿ ನೀಡಿದರು.
