LatestTop Storiesಉಡುಪಿ-Udupi

ಕೊಲ್ಲೂರಿನಲ್ಲಿ ಬಿದ್ದ ಬೃಹತ್ ಲೈಟ್ ಸೆಟ್; ವೃದ್ಧನಿಗೆ ಗಂಭೀರ ಗಾಯ

ಉಡುಪಿ.ಅ.14- ನವರಾತ್ರಿ ಸಂಭ್ರಮದ ನಡುವೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮುಂಭಾಗದಲ್ಲಿ ಅಳವಡಿಸಲಾಗಿದ್ದ ಬೃಹತ್ ಗಾತ್ರದ ಲೈಟ್ ಸೆಟ್ ಗಾಳಿಯ ರಭಸಕ್ಕೆ ಕುಸಿದು ಭಕ್ತರ ಮೇಲೆ ಬಿದ್ದ ಘಟನೆ ನಡೆದಿದೆ. ಘಟನೆಯಲ್ಲಿ ವಯೋವೃದ್ಧ ಭಕ್ತರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮುಂಭಾಗದಲ್ಲಿರುವ ವಾಣಿಜ್ಯ ಸಂಕೀರ್ಣದ ಮೇಲ್ಭಾಗದಲ್ಲಿ ನವರಾತ್ರಿ ಉತ್ಸವದ ವಿಶೇಷ ಅಲಂಕಾರಕ್ಕಾಗಿ ಬೃಹತ್ ಗಾತ್ರದ ಲೈಟ್ ಸೆಟ್ ಅಳವಡಿಸಲಾಗಿತ್ತು. ಇಂದು ಬೀಸಿದ ಬಲವಾದ ಗಾಳಿಯ ಪರಿಣಾಮ ಲೈಟ್ ಸೆಟ್ ಕಟ್ಟಡದ ಮೇಲಿನಿಂದ ಉರುಳಿ ಕೆಳಗೆ ಬಿದ್ದಿದೆ.

ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಕಟ್ಟಡದ ನೆರಳಿನಲ್ಲಿ ನಿಂತಿದ್ದ ಭಕ್ತರ ಮೇಲೆ ಲೈಟ್ ಸೆಟ್ ಬಿದ್ದಿದ್ದು, ಮೂವರು ಭಕ್ತರು ಅಪಾಯಕ್ಕೆ ಸಿಲುಕಿದರು. ಲೈಟ್ ಸೆಟ್ ಏಕಾಏಕಿ ಬೀಳುತ್ತಿದ್ದಂತೆ ಭಕ್ತರು ಅದರಡಿಯಿಂದ ಹೊರಬರಲು ಪ್ರಯತ್ನಿಸಿದರು. ಈ ವೇಳೆ ವಯೋವೃದ್ಧ ಭಕ್ತರೊಬ್ಬರ ತಲೆಯ ಮೇಲೆ ಲೈಟ್ ಬಿದ್ದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡು ಮೇಲೇಳಲಾಗದೆ ಪರದಾಡಿದರು.

ಕೂಡಲೇ ಸ್ಥಳೀಯರು ನೆರವಿಗೆ ಧಾವಿಸಿ ಲೈಟ್ ಸೆಟ್ ತೆರವುಗೊಳಿಸಿದರು. ಬಳಿಕ ಗಂಭೀರವಾಗಿ ಗಾಯಗೊಂಡ ವಯೋವೃದ್ಧರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು, ದೇವಸ್ಥಾನದ ಮುಂಭಾಗದ ಅಲಂಕಾರಿಕ ವ್ಯವಸ್ಥೆಗಳ ಸುರಕ್ಷತೆಯ ಕುರಿತು ಆತಂಕ ಮೂಡಿಸಿದೆ.

Share with Friends
author avatar
Digital Desk