
ರಾಜ್ಯದಲ್ಲಿ ಮುಂದುವರೆದ ಮಳೆ ಅಬ್ಬರ..!
ಉಡುಪಿ : ರಾಜ್ಯಾದ್ಯಂತ ಮಳೆಯ ಅಬ್ಬರ ಮುಂದುವರಿದಿದ್ದು, ಹಲವು ಜಿಲ್ಲೆಗಳಲ್ಲಿ ಉತ್ತಮ ವರ್ಷಧಾರೆ ದಾಖಲಾಗಿದೆ. ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕ ಭಾಗಗಳಲ್ಲಿ ಕಳೆದ 24 ಗಂಟೆಗಳಿಂದ ನಿರಂತರ ಮಳೆಯಾಗುತ್ತಿದ್ದು, ಜನಜೀವನದ ಮೇಲೆ ಪರಿಣಾಮ ಬೀರಿದೆ.
ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಬೈಂದೂರು ತಾಲೂಕಿನ ಕೆರ್ಗಾಳುವಿನಲ್ಲಿ ಅತ್ಯಧಿಕ ವರ್ಷಧಾರೆ ದಾಖಲಾಗಿದೆ. ನದಿಗಳು ಮತ್ತು ಹಳ್ಳಗಳು ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು, ಸ್ಥಳೀಯ ಆಡಳಿತ ಎಚ್ಚರಿಕೆ ವಹಿಸಿದೆ.
ರಾಜಧಾನಿ ಬೆಂಗಳೂರಿನ ಹಲವೆಡೆ ಬೆಳಗ್ಗೆಯಿಂದಲೇ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ನಿಧಾನಗೊಂಡಿದೆ. ಕೆಲವೆಡೆ ನೀರು ನಿಂತ ಪರಿಣಾಮ ಸಂಚಾರ ದಟ್ಟಣೆ ಉಂಟಾಗಿದೆ.
ಹವಾಮಾನ ಇಲಾಖೆ ರಾಜ್ಯದ ಅರ್ಧ ಭಾಗಕ್ಕೆ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಮುಂದಿನ 24 ರಿಂದ 48 ಗಂಟೆಗಳವರೆಗೆ ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಮಧ್ಯಮದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.
ಯೆಲ್ಲೋ ಅಲರ್ಟ್ ಘೋಷಿಸಲಾದ ಜಿಲ್ಲೆಗಳು: ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಬೆಳಗಾವಿ, ಧಾರವಾಡ, ಗದಗ, ಉತ್ತರ ಕನ್ನಡ, ಹಾವೇರಿ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ವಿವಿಧೆಡೆ ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ.
ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದ್ದು, ನದಿ ತೀರ ಹಾಗೂ ತಗ್ಗು ಪ್ರದೇಶದ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕೆಂದು ಜಿಲ್ಲಾಡಳಿತ ಮತ್ತು ಹವಾಮಾನ ಇಲಾಖೆ ಮನವಿ ಮಾಡಿವೆ. ಸಾರ್ವಜನಿಕರು ಅಗತ್ಯವಿಲ್ಲದ ಪ್ರಯಾಣವನ್ನು ಸಾಧ್ಯವಾದಷ್ಟು ತಪ್ಪಿಸಿ, ಹವಾಮಾನ ಇಲಾಖೆಯ ಅಧಿಕೃತ ಮಾಹಿತಿ ಮತ್ತು ಸ್ಥಳೀಯ ಆಡಳಿತದ ಸೂಚನೆಗಳನ್ನು ಪಾಲಿಸುವಂತೆ ಸಲಹೆ ನೀಡಲಾಗಿದೆ.
