Latestಕೃಷಿ-Agricultureಬೆಂಗಳೂರು-Bengaluru

ರಾಜ್ಯದಲ್ಲಿ ಮತ್ತೆ ಟೊಮೆಟೊ ಬೆಳೆಗಾರರಿಗೆ ಸಂಕಷ್ಟ..!

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಟೊಮೆಟೊ ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ. ಕಳೆದ ಕೆಲ ದಿನಗಳಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಕಾಣುತ್ತಿದ್ದ ‘ಕೆಂಪು ಸುಂದರಿ’ ಟೊಮೆಟೊ, ಇದೀಗ ದಿಢೀರ್ ಬೆಲೆ ಕುಸಿತದ ದಾರಿ ಹಿಡಿದಿದೆ. ಮಾರುಕಟ್ಟೆಗಳಲ್ಲಿ ಟೊಮೆಟೊ ಕೇಳೋರಿಲ್ಲದಂತಾಗಿದ್ದು, ಬೆಳೆಗಾರರ ಜೀವನ ಮತ್ತೆ ಸಾಲದ ಸುಳಿಗೆ ಸಿಲುಕುವಂತಾಗಿದೆ.

ಲಾಭದ ನಿರೀಕ್ಷೆಯಲ್ಲಿದ್ದ ಟೊಮೆಟೊ ಬೆಳೆಗಾರರು ಈಗ ಮಾರುಕಟ್ಟೆಯ ಪರಿಸ್ಥಿತಿ ನೋಡಿ ತೀವ್ರ ಕಂಗಾಲಾಗಿದ್ದಾರೆ. ಎಪಿಎಂಸಿ ಹಾಗೂ ಪ್ರಮುಖ ಮಾರುಕಟ್ಟೆಗಳಲ್ಲಿ 15 ಕೆಜಿಯ ಒಂದು ಬಾಕ್ಸ್ ಟೊಮೆಟೊ ಗರಿಷ್ಠ 200 ರೂ.ಗೆ ಹರಾಜಾಗುತ್ತಿದ್ದರೆ, ಕನಿಷ್ಠ ಬೆಲೆ ಬರಿ 50 ರೂ.ಗೆ ಕುಸಿತ ಕಂಡಿದೆ. ಅಂದರೆ ಕೆಜಿಗೆ 3 ರಿಂದ 4 ರೂಪಾಯಿ ಬೆಲೆಯೂ ಸಿಗದಂತಾಗಿದೆ.
​ಆಳುಗಳ ಕೂಲಿ, ಸಾಗಣೆ ವೆಚ್ಚ ಹಾಗೂ ರಸಗೊಬ್ಬರದ ವೆಚ್ಚವೂ ಸಹ ಕೈಸೇರದೆ ರೈತರು ಕಣ್ಣೀರು ಹಾಕುವಂತಾಗಿದೆ

​ಬೆಲೆ ಕುಸಿತಕ್ಕೆ ಪ್ರಮುಖ ಕಾರಣವೆಂದರೆ ರಾಜ್ಯದಿಂದ ಬೇರೆ ರಾಜ್ಯಗಳಿಗೆ ಟೊಮೆಟೊ ಪೂರೈಕೆಯಲ್ಲಿ ಇಳಿಮುಖ ಉಂಟಾಗಿರುವುದು. ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಲ್ಲೂ ಸ್ಥಳೀಯವಾಗಿ ಟೊಮೆಟೊ ಇಳುವರಿ ಹೆಚ್ಚಾಗಿರುವುದರಿಂದ, ಕರ್ನಾಟಕದ ಟೊಮೆಟೊಗೆ ಹೊರರಾಜ್ಯಗಳಿಂದ ಬೇಡಿಕೆ ಸಂಪೂರ್ಣ ಕಡಿಮೆಯಾಗಿದೆ.

ಇತ್ತ ಮಾರುಕಟ್ಟೆಗೆ ದಿನಂಪ್ರತಿ ಆವಕ ಹೆಚ್ಚಾಗುತ್ತಿದ್ದು, ಕೊಳ್ಳುವವರಿಲ್ಲದೆ ಟೊಮೆಟೊ ಹಣ್ಣುಗಳು ರಸ್ತೆಯಲ್ಲೇ ಕೊಳೆಯುವ ಹಂತಕ್ಕೆ ತಲುಪಿವೆ. ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ, ನಷ್ಟದಲ್ಲಿರುವ ಟೊಮೆಟೊ ಬೆಳೆಗಾರರಿಗೆ ಸೂಕ್ತ ಬೆಂಬಲ ಬೆಲೆ ಘೋಷಿಸಬೇಕೆಂದು ರೈತ ಸಂಘಟನೆಗಳು ಒತ್ತಾಯಿಸಿವೆ.

Share with Friends
author avatar
Digital Desk