ರಾಜಕೀಯ | Politicsರಾಜ್ಯ-Karnataka

ಚನ್ನಮ್ಮನವರಿಗೆ ಶ್ರದ್ಧಾಂಜಲಿ ಸಲ್ಲಿಸಿ ದೇವೇಗೌಡರಿಗೆ ಸಾಂತ್ವನ ಹೇಳಿದ ರಾಜ್ಯಪಾಲರು

ಬೆಂಗಳೂರು: ರಾಜ್ಯಪಾಲ ತಾವರಚಂದ್ ಗೆಹಲೋಟ್ ಅವರು ಇಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಹೆಚ್.ಡಿ. ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿ, ಇತ್ತೀಚೆಗೆ ನಿಧನರಾದ ಚೆನ್ನಮ್ಮ ದೇವೇಗೌಡ ಅವರಿಗೆ ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.

ಈ ಸಂದರ್ಭದಲ್ಲಿ ರಾಜ್ಯಪಾಲರು ಹೆಚ್.ಡಿ. ದೇವೇಗೌಡ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿ ಸಾಂತ್ವನ ತಿಳಿಸಿದರು. ಕುಟುಂಬದ ದುಃಖದಲ್ಲಿ ತಾವು ಸಹ ಭಾಗಿಯಾಗಿರುವುದಾಗಿ ಹೇಳಿ, ಮೃತರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸಿದರು.

ಈ ವೇಳೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ. ರೇವಣ್ಣ, ಶಾಸಕ ಬಸನಗೌಡ ಪಾಟೀಲ್ ಸೇರಿದಂತೆ ದೇವೇಗೌಡ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

HDD 2

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ದೇವೇಗೌಡ ಅವರು ವಯೋಸಹಜ ಅನಾರೋಗ್ಯದಿಂದ ಶನಿವಾರ ನಿಧನರಾಗಿದ್ದರು.

ಸರ್ಕಾರದ ಆದೇಶದಂತೆ ಹಾಸನ ಜಿಲ್ಲೆಯ ಮಾವಿನಕೆರೆ ಗ್ರಾಮದಲ್ಲಿ ಚೆನ್ನಮ್ಮ ದೇವೇಗೌಡ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಅಂತಿಮ ನಮನ ಸಲ್ಲಿಸಲು ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಗಣ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಗೌರವ ಸಲ್ಲಿಸಿದರು.

Share with Friends
author avatar
News Desk