BlogLatestರಾಜಕೀಯ | Politicsರಾಜ್ಯ-Karnataka

ವಕ್ಫ್ ವಿಚಾರ ಮುಂದಿಟ್ಟುಕೊಂಡು ರೈತನ ಹೆಸರಲ್ಲಿ ಬಿಜೆಪಿ ರಾಜಕೀಯ : ಪ್ರಿಯಾಂಕ್ ಖರ್ಗೆ

ಬೆಂಗಳೂರು : ವಕ್ಫ್ ವಿಚಾರವನ್ನು ಮುಂದಿಟ್ಟು ರೈತನ ಹೆಸರಲ್ಲೂ ಈಗ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದು, ನಿಮ್ಮ ಸರ್ಕಾರದ ಅವಧಿಯಲ್ಲಿ ರೈತರಿಗೆ ನೊಟೀಸ್​​ ಕೊಟ್ಟಿಲ್ವಾ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಪಿಸಿ (ಜಂಟಿ ಸಂಸದೀಯ ಸಮಿತಿ) ಭೇಟಿ ನೀಡಿ ವಕ್ಫ್​​ ಆಸ್ತಿ ವಿವಾದದ ಕುರಿತು ಬಿಜೆಪಿಗರ ಮನವಿ ಸ್ವೀಕರಿಸಿದೆ. ಜೆಪಿಸಿಯು ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆ ಮಾಡುತ್ತಿದೆ. ಜಾರ್ಖಂಡ್, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿದ್ದಾಗ ಈ ರೀತಿ ಮಾಡುತ್ತಿರುವುದು ರಾಜಕೀಯ ದುರುದ್ದೇಶವಲ್ಲವೇ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಶೋಭಾ ಕರಂದ್ಲಾಜೆ ಅವರು ಸಂಸತ್ತಿನಲ್ಲಿ ವಕ್ಫ್ ಆಸ್ತಿ ಬಗ್ಗೆ ಪ್ರಶ್ನೆ ಕೇಳಿದಾಗ, ಕೇಂದ್ರ ಸರ್ಕಾರವು “ನಾವು ವಕ್ಫ್ ಆಸ್ತಿಯನ್ನು ಜಿಐಎಸ್ ಮ್ಯಾಪಿಂಗ್ ಮಾಡಿ, ಬೌಂಡರಿ ಹಾಕುತ್ತಿದ್ದೇವೆ. ಒತ್ತುವರಿಯಾಗಿರುವ ಜಮೀನು ತೆರವುಗೊಳಿಸಿ ವಕ್ಫ್ ಆಸ್ತಿಯನ್ನು ಸಂರಕ್ಷಣೆ ಮಾಡುತ್ತೇವೆ. ಈ ತಂತ್ರಜ್ಞಾನದ ಬಳಕೆಗಾಗಿ ಪ್ರತಿ ರಾಜ್ಯಕ್ಕೆ 12 ಕೋಟಿಯಂತೆ 350 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು” ಎಂದು ಹೇಳುತ್ತಾರೆ. ಈ ರೀತಿ ಹೇಳಿದಾಗ, ಸಂಸದರಾಗಿ ನೀವು ಕತ್ತೆ ಕಾಯುತ್ತಿದ್ದರೇ ಎಂದು ಕಿಡಿಕಾರಿದರು.

ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ವಕ್ಫ್ ಆಸ್ತಿ ಬಗ್ಗೆ ಆಡಿರುವ ಮಾತುಗಳನ್ನು ಗಮನಿಸಿರಲಿಲ್ಲವೇ? ಈಗ ಜೆಪಿಸಿ ಸಮಿತಿ ನಾಟಕವಾಡುತ್ತಿದ್ದಾರೆ. ಸಮಿತಿಯ ಕಾರ್ಯವೈಖರಿಗೆ ಅದರದೇ ಆದ ವ್ಯವಸ್ಥೆ ಇದೆ. ಅವರು ಪ್ರವಾಸಿಗರಾಗಿ ರಾಜ್ಯಕ್ಕೆ ಭೇಟಿ ನೀಡಲಿ.

ಈ ವಿಚಾರವಾಗಿ ಮಾಹಿತಿ ಕಲೆಹಾಕುವುದಾದರೆ, ಸಮಿತಿಯ ಇತರೆ ಸದಸ್ಯರು ಯಾಕೆ ಬಂದಿಲ್ಲ? ಸಮಿತಿಗೆ ಸಂಬಂಧವಿಲ್ಲದ ಬಿಜೆಪಿ ನಾಯಕರ ಜತೆ ವಿಚಾರಣೆ ನಡೆಸುತ್ತಿರುವುದೇಕೆ ಎಂದು ಪ್ರಿಯಾಂಕ್​ ಟೀಕಿಸಿದರು.

Share with Friends
author avatar
News Desk