
ರಾಘವೇಂದ್ರ ಹೇಳಿಕೆಗೆ ಬೇಳೂರು ತಿರುಗೇಟು
ಶಿವಮೊಗ್ಗ.ಸೆ.26- ಸಚಿವ ಮಧು ಬಂಗಾರಪ್ಪ ವಿರುದ್ಧ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಏಕವಚನದಲ್ಲಿ ಮಾತನಾಡಿರುವುದಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಘವೇಂದ್ರ ವೀರಾವೇಶದಿಂದ ಮಾತನಾಡಿದ್ದಾರೆ.ಶಿಕಾರಿಪುರದ ಶೂರರಂತೆ ಮಾತನಾಡುವ ಮುನ್ನ, ಮುಂದಿನ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಲ್ಲಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.
ನನಗೆ ಏಕವಚನದಲ್ಲಿ ಮಾತನಾಡಲು ಬಿಟ್ಟರೆ ರಾಘವೇಂದ್ರ ನೀನು ಗಾಳಿಗೆ ತೂರಿ ಹೋಗುತ್ತೀಯ ಎಂದು ಬೇಳೂರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಗ್ಗೆ ನನಗೆ ಅಪಾರ ಗೌರವವಿದೆ.ಅವರಿಗೆ ನಾನು ಗೌರವ ನೀಡುತ್ತೇನೆ.ಆದರೆ ಪಕ್ಷದ ವಿಚಾರ ಬಂದಾಗ ಅವರ ರಾಜಕೀಯ ನಿಲುವುಗಳ ಕುರಿತು ಮಾತನಾಡುತ್ತೇನೆ.ಎಲ್ಲಿಯೂ ಏಕವಚನ ಬಳಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕುಮಾರ್ ಬಂಗಾರಪ್ಪಗೆ ಶಿಕಾರಿಪುರದಲ್ಲಿ ಬಿಜೆಪಿ ಟಿಕೆಟ್ ನೀಡಿದ್ದರೆ ವಿಜಯೇಂದ್ರ ರಾಜಕೀಯವಾಗಿ ಹಿನ್ನಡೆ ಅನುಭವಿಸುತ್ತಿದ್ದರು ಎಂದು ಬೇಳೂರು ಅಭಿಪ್ರಾಯಪಟ್ಟರು.ಕಾಂಗ್ರೆಸ್ ಯಾರ ವೈಯಕ್ತಿಕ ಸ್ವತ್ತೂ ಅಲ್ಲ. ಪಕ್ಷಕ್ಕೆ ಬರುವ ಎಲ್ಲರನ್ನೂ ಸ್ವಾಗತಿಸಲಾಗುವುದು ಎಂದರು.
ಬಿಜೆಪಿ ಹಮ್ಮಿಕೊಂಡಿರುವ ಬಳ್ಳಾರಿ ಚಲೋಗೆ ಪ್ರತಿಯಾಗಿ ಶಿಕಾರಿಪುರದಲ್ಲೇ ಕಾಂಗ್ರೆಸ್ ವತಿಯಿಂದ ಬೃಹತ್ ಹೋರಾಟ ಆರಂಭಿಸುವ ಕುರಿತು ತೀರ್ಮಾನಿಸಲಾಗಿದೆ. ಶಿಕಾರಿಪುರದಿಂದ ಬೃಹತ್ ಪಾದಯಾತ್ರೆ ನಡೆಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.
ಸುಂದರೇಶ್ ಹೇಳಿಕೆಗೂ ಪ್ರತಿಕ್ರಿಯೆ :
ಕಾಂಗ್ರೆಸ್ ಮುಖಂಡ ಎಚ್.ಎಸ್.ಸುಂದರೇಶ್ ಅವರ ಇತ್ತೀಚಿನ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಬೇಳೂರು, ಅಧಿಕಾರ ಇಲ್ಲದ ಕಾರಣದಿಂದ ಈ ರೀತಿಯ ಹೇಳಿಕೆ ನೀಡಿರಬಹುದು ಎಂದರು.
ಯಾರೂ ನೇರವಾಗಿ ಪಕ್ಷದ ವಿರುದ್ಧ ಮಾತನಾಡಬಾರದು. ಜಿಲ್ಲಾಧ್ಯಕ್ಷ ಸ್ಥಾನ ಸಿಗುವ ನಿರೀಕ್ಷೆ ಸುಂದರೇಶ್ ಅವರಿಗಿತ್ತು. ಆದರೆ ಸ್ಥಾನ ದೊರೆಯದ ಬೇಸರದಿಂದ ಅವರು ಮಾತನಾಡಿರಬಹುದು ಎಂದು ಬೇಳೂರು ಹೇಳಿದರು.
