LatestTop Storiesಬೆಂಗಳೂರು-Bengaluru

ಬರ ಪರಿಹಾರ: 1,250 ಕೋಟಿ ಮೊದಲ ಹಂತದ ನೆರವು- ಡಿಸಿಎಂ ಪರಮೇಶ್ವರ್

ಬೆಂಗಳೂರು.ಸೆ.25- ರಾಜ್ಯದಲ್ಲಿ ಬರ ತಲೆದೋರಿರುವ ಹಿನ್ನೆಲೆಯಲ್ಲಿ ಪರಿಹಾರವಾಗಿ ನೀಡುತ್ತಿರುವ ೧,೨೫೦ ಕೋಟಿ ಸಣ್ಣ ಮೊತ್ತವಲ್ಲ. ಇದು ಮೊದಲ ಹಂತದಲ್ಲಿ ನೀಡಲಾಗುತ್ತಿರುವ ಪರಿಹಾರ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಬರ ಪರಿಹಾರ ಮೊತ್ತ ಕಡಿಮೆಯಾಗಿದೆ ಎಂಬ ಬಿಜೆಪಿ ನಾಯಕರ ಟೀಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಅವರು,ಕೇಂದ್ರ ಸರ್ಕಾರದಿಂದ ಮುಂದಿನ ಹಂತದಲ್ಲಿ ಎಷ್ಟು ಪರಿಹಾರ ದೊರೆಯಲಿದೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಕೇಂದ್ರ ಸರ್ಕಾರಕ್ಕೆ ಎರಡು ಮನವಿ ಪತ್ರಗಳನ್ನು ಸಲ್ಲಿಸಲಾಗುವುದು. ಎನ್‌ಡಿಆರ್‌ಎಫ್ ಮಾರ್ಗಸೂಚಿಗಳ ಅನ್ವಯ ಹೆಚ್ಚುವರಿಯಾಗಿ ೪೦ ಸಾವಿರ ಕೋಟಿ ಪರಿಹಾರ ಕೇಳಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.

ಕಳೆದ ವರ್ಷ ಮಾರ್ಗಸೂಚಿಗಳ ಪ್ರಕಾರ ೧೮ ಸಾವಿರ ಕೋಟಿ ಬಂದಿತ್ತು.ಈ ಬಾರಿ ಎಷ್ಟು ಮೊತ್ತ ಬಿಡುಗಡೆಯಾಗಲಿದೆ ಎಂಬುದು ಗೊತ್ತಿಲ್ಲ.ಕೇಂದ್ರ ಸರ್ಕಾರ ಒಬ್ಬ ಐಎಎಸ್ ಅಧಿಕಾರಿಯನ್ನು ರಾಜ್ಯಕ್ಕೆ ಕಳುಹಿಸಿ ಪರಿಶೀಲನೆ ನಡೆಸಲಿದೆ ಎಂದು ತಿಳಿಸಿದರು.

ಗ್ರಾಮೀಣ ಜನರಿಗೆ ರಾಜ್ಯ ಸರ್ಕಾರ ಹಲವು ರೀತಿಯ ಸೌಲಭ್ಯ ನೀಡುತ್ತಿದೆ. ವಿದ್ಯುತ್ ಸಬ್ಸಿಡಿಗಾಗಿ ೨೫ ಸಾವಿರ ಕೋಟಿ ನೀಡಲಾಗುತ್ತಿದೆ. ಅಕ್ಕಿ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಜನರಿಗೆ ನೆರವು ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ವಿಶೇಷಚೇತನರ ಪ್ರತಿಭಟನೆ :

ವಿಶೇಷಚೇತನರ ಬೇಡಿಕೆಗಳ ಕುರಿತು ಮಾತನಾಡಿದ ಪರಮೇಶ್ವರ್, ಸಂಬಂಧಪಟ್ಟ ಇಲಾಖೆಯಿಂದ ಪ್ರಸ್ತಾವನೆ ಬರಬೇಕು. ಮುಖ್ಯಮಂತ್ರಿ ಅವರೇ ಹಣಕಾಸು ಸಚಿವರಾಗಿದ್ದು, ಪ್ರಸ್ತಾವನೆ ಸಚಿವ ಸಂಪುಟದ ಮುಂದೆ ಬಂದರೆ ಎಲ್ಲರೂ ಸಹಕರಿಸುವುದಾಗಿ ಹೇಳಿದರು.

ಚಿಕ್ಕಬಳ್ಳಾಪುರ ಪ್ರಕರಣ ;

ಚಿಕ್ಕಬಳ್ಳಾಪುರದಲ್ಲಿ ಶಂಕಿತ ಉಗ್ರನ ಬಂಧನ ಸಂಬಂಧ ಮಾತನಾಡಿದ ಅವರು,ಇದು ಗೃಹ ಸಚಿವರನ್ನು ಕೇಳಿ.ನಾನು ಈಗ ಮಾಜಿ ಗೃಹ ಸಚಿವ ಎಂದು ಪರಮೇಶ್ವರ್ ಪ್ರತಿಕ್ರಿಯಿಸಿದರು.

ಸರ್ವಪಕ್ಷ ನಿಯೋಗ ದೆಹಲಿಗೆ :

ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದೊಯ್ಯುವ ವಿಚಾರದಲ್ಲಿ ಸರ್ಕಾರ ಸಿದ್ಧವಿದೆ.ಈ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧಿವೇಶನದಲ್ಲೇ ನಿನ್ನೆ ತಿಳಿಸಿದ್ದರು. ವಿಪಕ್ಷದವರು ಬರಲು ಸಿದ್ಧರಿದ್ದರೆ ಸರ್ಕಾರವೇ ನಿಯೋಗವನ್ನು ದೆಹಲಿಗೆ ಕರೆದೊಯ್ಯಲಿದೆ. ಆದರೆ, ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

Share with Friends
author avatar
Digital Desk