Latestಜಿಲ್ಲಾ ಸುದ್ದಿಗಳು | District Newsಬೆಳಗಾವಿ-Belagavi

ವಿವಾಹಿತೆಯೊಂದಿಗೆ ಯುವಕ ಪರಾರಿ ಆರೋಪ : ಯುವಕನ ಮನೆ ಮೇಲೆ ದಾಳಿ, ಸಂಪೂರ್ಣ ಧ್ವಂಸ

ಬೆಳಗಾವಿ : ಜೂ.30 : ಬೆಳಗಾವಿ ಜಿಲ್ಲೆಯ ಭರಮ್ಯಾನಟ್ಟಿ ಗ್ರಾಮದಲ್ಲಿ ಆತಂಕಕಾರಿ ಘಟನೆ ನಡೆದಿದ್ದು, ವಿವಾಹಿತೆಯೊಂದಿಗೆ ಯುವಕ ಪರಾರಿಯಾಗಿದ್ದಾನೆ ಎಂಬ ಆರೋಪದ ಹಿನ್ನೆಲೆ ಯುವಕನ ಮನೆಯ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿರುವ ಘಟನೆ ವರದಿಯಾಗಿದೆ.

ಮಾಹಿತಿಯ ಪ್ರಕಾರ, ಮಾರಕಾಸ್ತ್ರಗಳೊಂದಿಗೆ ಬಂದಿದ್ದ ಸುಮಾರು 200ಕ್ಕೂ ಹೆಚ್ಚು ಜನರು ಯುವಕ ಯಲ್ಲಪ್ಪ ನಾಯಕ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಮನೆಯ ಹಂಚುಗಳನ್ನು ಒಡೆದು, ಅಲ್ಮಾರಿ, ಟಿವಿ ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ಹಾನಿಗೊಳಿಸಲಾಗಿದೆ. ಘಟನೆ ವೇಳೆ ಮನೆಯಲ್ಲಿದ್ದ ಕುಟುಂಬಸ್ಥರ ಮೇಲೂ ಹಲ್ಲೆಗೆ ಯತ್ನ ನಡೆದಿದ್ದು, ಪ್ರಾಣಭಯದಿಂದ ಯಲ್ಲಪ್ಪನ ಪೋಷಕರು ಸ್ಥಳದಿಂದ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಇದಲ್ಲದೆ, ಮನೆಯಲ್ಲಿ ಇದ್ದ ಚಿನ್ನಾಭರಣ, ನಗದು ಹಾಗೂ ಕುರಿಗಳನ್ನು ಕೊಂಡೊಯ್ದಿರುವ ಆರೋಪವೂ ಕೇಳಿಬಂದಿದೆ.

ಈ ಕುರಿತು ಸ್ಪಷ್ಟನೆ ನೀಡಿರುವ ಸತೀಶ್ ಜಾರಕಿಹೊಳಿ ಅವರ ಆಪ್ತ ಸಹಾಯಕ ಅರವಿಂದ್ ಕಾರ್ಚೆ ಅವರು, ಉದ್ಯಮ ಭಾಗ ಪೊಲೀಸ್ ಠಾಣೆಯಲ್ಲಿ ಯುವತಿ ಹಾಗೂ ಯುವಕ ಸಂಬಂಧಿಸಿದಂತೆ ಮಿಸ್ಸಿಂಗ್ ಪ್ರಕರಣ ದಾಖಲಾಗಿತ್ತು ಎಂದು ತಿಳಿಸಿದ್ದಾರೆ. ಯುವತಿ ಹಾಗೂ ಯುವಕ ಜೈತೂನ ಮಾಳ ನಗರದಲ್ಲಿ ವಾಸವಾಗಿದ್ದು, ಭರಮ್ಯಾನಟ್ಟಿ ಗ್ರಾಮ ಅಥವಾ ಯಮಕನಮರಡಿ ಕ್ಷೇತ್ರದೊಂದಿಗೆ ನೇರ ಸಂಬಂಧ ಇಲ್ಲ ಎಂದು ಅವರು ಹೇಳಿದ್ದಾರೆ.

ಮೂಲಗಳ ಪ್ರಕಾರ, ಕಳೆದ ವರ್ಷ ಬಸಪ್ಪ ನಾಯಕ ಅವರೊಂದಿಗೆ ವಿವಾಹವಾಗಿದ್ದ ನಾಗವ್ವ ನಾಯಕ ಅವರು ಎರಡು ದಿನಗಳ ಹಿಂದೆ ಯಲ್ಲಪ್ಪ ನಾಯಕ ಜೊತೆ ತೆರಳಿದ್ದಾರೆ ಎನ್ನಲಾಗಿದೆ. ಬಸಪ್ಪ ಮತ್ತು ಯಲ್ಲಪ್ಪ ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದು, ಬೆಳಗಾವಿಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಘಟನೆಯ ನಂತರ ಸಂತ್ರಸ್ತ ಕುಟುಂಬ ಪೊಲೀಸ್ ಕಮೀಷನರ್ ಅವರನ್ನು ಸಂಪರ್ಕಿಸಿ ದಾಳಿಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಇದೇ ವೇಳೆ ಅರವಿಂದ್ ಕಾರ್ಚೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹಾಗೂ ನೆರವು ನೀಡಿದ್ದಾರೆ.

Share with Friends
author avatar
Digital Desk