
ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೋತದಾರ್ ಟ್ರಸ್ಟ್ನಿಂದ ₹10 ಲಕ್ಷ ಶಿಷ್ಯವೇತನ
ಬೆಳಗಾವಿ: ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಪೋತದಾರ್ ಟ್ರಸ್ಟ್ ವತಿಯಿಂದ 107 ವಿದ್ಯಾರ್ಥಿಗಳಿಗೆ ಸುಮಾರು ₹10 ಲಕ್ಷ ಮೌಲ್ಯದ ಶಿಷ್ಯವೇತನ, ಶಾಲಾ ಶುಲ್ಕ, ಶಾಲಾ ಸಮವಸ್ತ್ರ, ಶೂ, ಮಳೆಗಾಲಕ್ಕೆ ಅಗತ್ಯವಾದ ರೇನ್ಕೋಟ್ ಹಾಗೂ ಛತ್ರಿಗಳನ್ನು ವಿತರಿಸಲಾಯಿತು.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್ನ ಅನಿಲ್ ಪೋತದಾರ್, ಕಳೆದ ಐದು ವರ್ಷಗಳಿಂದ ಯಾವುದೇ ಜಾತಿ, ಮತ, ಪಂಥದ ಭೇದವಿಲ್ಲದೆ ಬಡ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿರುವುದಾಗಿ ತಿಳಿಸಿದರು. ಶಾಲಾ ಶುಲ್ಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈ ಸೇವಾ ಕಾರ್ಯ ಕೈಗೊಳ್ಳಲಾಗಿದೆ ಎಂದರು.
ಮುಂದಿನ ವರ್ಷಗಳಲ್ಲಿ ಇನ್ನಷ್ಟು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿಗೆ ನೆರವು ನೀಡುವ ಗುರಿ ಹೊಂದಿದ್ದು, ದಾನಿಗಳ ಸಹಕಾರದಿಂದ ಶಿಕ್ಷಣ ಸೇವೆಯನ್ನು ಇನ್ನಷ್ಟು ವಿಸ್ತರಿಸಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರವಿ ಪೋತದಾರ್, ದೀಪಕ್ ಪೋತದಾರ್, ಅವಿನಾಶ್ ಪೋತದಾರ್, ಅರವಿಂದ್ ಹುನಗುಂದ, ಗ್ರಾಮೋಪಾಧ್ಯಾಯ ಸೇರಿದಂತೆ ಟ್ರಸ್ಟ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
