
ಇಂಡೋನೇಷ್ಯಾದಲ್ಲಿ 7.7 ತೀವ್ರತೆಯ ಭೀಕರ ಭೂಕಂಪ ; 47 ಮಂದಿ ಸಾವು
ಇಂಡೋನೇಷ್ಯಾ: ಫ್ಲೋರೆಸ್ ಪ್ರದೇಶದ ಸಮುದ್ರದಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದ 7.7 ತೀವ್ರತೆಯ ಪ್ರಬಲ ಭೂಕಂಪಕ್ಕೆ ಕನಿಷ್ಠ 47 ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದು, ಕಟ್ಟಡಗಳು ಕುಸಿದಿವೆ. ಭೂಕಂಪದ ಬಳಿಕ ಕರಾವಳಿ ಪ್ರದೇಶಗಳಲ್ಲಿ ಸಣ್ಣ ಸುನಾಮಿ ಅಲೆಗಳು ಅಪ್ಪಳಿಸಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಆತಂಕ ವ್ಯಕ್ತವಾಗಿದೆ.
ಭೂಕಂಪದ ಹಿನ್ನೆಲೆಯಲ್ಲಿ ಅಧಿಕಾರಿಗಳು ಆರಂಭದಲ್ಲಿ ಸುನಾಮಿ ಎಚ್ಚರಿಕೆ ನೀಡಿ, ಕರಾವಳಿ ನಿವಾಸಿಗಳಿಗೆ ಸುರಕ್ಷಿತ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಸೂಚಿಸಿದ್ದರು. ಬಳಿಕ ಸಮುದ್ರ ಮಟ್ಟದಲ್ಲಿ ಅಪಾಯಕಾರಿ ಏರಿಕೆ ಕಂಡುಬಾರದ ಹಿನ್ನೆಲೆಯಲ್ಲಿ ಎಚ್ಚರಿಕೆಯನ್ನು ಹಿಂಪಡೆಯಲಾಯಿತು. ಆದರೆ ಮಂಗರಾಯಿ ಹಾಗೂ ಪೂರ್ವ ಮಂಗರಾಯಿ ಜಿಲ್ಲೆಗಳ ಕರಾವಳಿ ಗ್ರಾಮಗಳಲ್ಲಿ ಸಣ್ಣ ಸುನಾಮಿ ಅಲೆಗಳು ದಾಖಲಾಗಿವೆ.
ಅಧಿಕಾರಿಗಳ ಪ್ರಕಾರ, ರಿಯುಂಗ್ ಕರಾವಳಿ ಗ್ರಾಮದಲ್ಲಿ ಸುಮಾರು 1.61 ಮೀಟರ್ ಎತ್ತರದ ಅಲೆ ಕಾಣಿಸಿಕೊಂಡಿದ್ದು, ಮನೆಗಳು ಹಾಗೂ ಮೂಲಸೌಕರ್ಯಗಳಿಗೆ ಹಾನಿಯಾಗಿದೆ. ಮೀನುಗಾರಿಕಾ ದೋಣಿಗಳು ದಡದಲ್ಲಿ ಸಿಲುಕಿಕೊಂಡಿವೆ. ಮೌರೋಲೆಯಲ್ಲಿ 0.94 ಮೀಟರ್ ಎತ್ತರದ ಅಲೆ ದಾಖಲಾಗಿದ್ದು, ಇತರೆ ಕೆಲವು ಪ್ರದೇಶಗಳಲ್ಲೂ 0.5 ಮೀಟರ್ಗಿಂತ ಹೆಚ್ಚು ಎತ್ತರದ ಅಲೆಗಳು ಕಂಡುಬಂದಿವೆ.
ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ಪ್ರಕಾರ, ಸ್ಥಳೀಯ ಕಾಲಮಾನ ಬೆಳಗ್ಗೆ 5.58ಕ್ಕೆ ಭೂಕಂಪ ಸಂಭವಿಸಿದ್ದು, ಕೇವಲ 10 ಕಿ.ಮೀ ಆಳದಲ್ಲಿ ಕಂಪನದ ಕೇಂದ್ರ ಪತ್ತೆಯಾಗಿದೆ. ಎಂಡೆ ನಗರದ ಉತ್ತರ-ವಾಯವ್ಯ ಭಾಗದಿಂದ ಸುಮಾರು 68 ಕಿ.ಮೀ ದೂರದಲ್ಲಿ ಭೂಕಂಪದ ಕೇಂದ್ರವಿತ್ತು. ಬಳಿಕ 235ಕ್ಕೂ ಹೆಚ್ಚು ಭೂಕಂಪಾನಂತರದ ಕಂಪನಗಳು ದಾಖಲಾಗಿದ್ದು, ಅವುಗಳಲ್ಲಿ ಅತಿ ಹೆಚ್ಚು 6.2 ತೀವ್ರತೆಯದ್ದಾಗಿತ್ತು.
ಭೂಕಂಪದಿಂದ ಉಂಟಾದ ಭೂಕುಸಿತಗಳಿಂದ ಫ್ಲೋರೆಸ್ ದ್ವೀಪದ ಪ್ರಮುಖ ಟ್ರಾನ್ಸ್-ಫ್ಲೋರೆಸ್ ಹೆದ್ದಾರಿ ಹಲವು ಕಡೆ ಬಂದ್ ಆಗಿದೆ. ವಿದ್ಯುತ್ ವ್ಯತ್ಯಯ ಹಾಗೂ ಸಂಪರ್ಕ ವ್ಯವಸ್ಥೆ ಹದಗೆಟ್ಟಿರುವುದರಿಂದ ದೂರದ ಗ್ರಾಮಗಳಿಂದ ಮಾಹಿತಿ ಸಂಗ್ರಹಿಸಲು ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಲು ಅಧಿಕಾರಿಗಳಿಗೆ ತೊಂದರೆಯಾಗಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ಮುಖ್ಯಸ್ಥ ಸುಹರ್ಯಾಂಟೊ ಪ್ರಕಾರ, ಸಿಕ್ಕಾ, ಮಂಗರಾಯಿ ಮತ್ತು ಪೂರ್ವ ಮಂಗರಾಯಿ ಪ್ರದೇಶಗಳಲ್ಲಿ ಕನಿಷ್ಠ 47 ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. 50ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕನಿಷ್ಠ 157 ಮನೆಗಳು ಸಂಪೂರ್ಣ ಕುಸಿದಿದ್ದು, ಸುಮಾರು 200 ಮನೆಗಳಿಗೆ ಹಾನಿಯಾಗಿದೆ. ಸುಮಾರು 2,000 ಮಂದಿ ತಾತ್ಕಾಲಿಕ ಆಶ್ರಯಕ್ಕೆ ಸ್ಥಳಾಂತರಗೊಂಡಿದ್ದಾರೆ.
ಶಾಲೆಗಳು, ವೈದ್ಯಕೀಯ ಕೇಂದ್ರಗಳು ಮತ್ತು ಚರ್ಚ್ಗಳು ಸೇರಿದಂತೆ 100ಕ್ಕೂ ಹೆಚ್ಚು ಸಾರ್ವಜನಿಕ ಕಟ್ಟಡಗಳಿಗೂ ಹಾನಿಯಾಗಿದೆ. ಭೂಕುಸಿತದಿಂದ ಹಲವು ದೂರದ ಗ್ರಾಮಗಳು ಸಂಪರ್ಕ ಕಳೆದುಕೊಂಡಿದ್ದು, ಕೆಲವು ಗ್ರಾಮಗಳು ಸಂಪೂರ್ಣವಾಗಿ ಮಣ್ಣಿನಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಗೆ ಮೂರು ಹೆಲಿಕಾಪ್ಟರ್ಗಳು ಹಾಗೂ ಒಂದು ರಕ್ಷಣಾ ನೌಕೆಯನ್ನು ನಿಯೋಜಿಸಲಾಗಿದೆ. ಅಗತ್ಯವಿದ್ದಲ್ಲಿ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಸಿದ್ಧತೆ ನಡೆಸಲಾಗಿದೆ.
ಭೂಕಂಪದ ತೀವ್ರತೆಗೆ ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ. ಸಿಕ್ಕಾ ಪ್ರದೇಶದ ನಿವಾಸಿಗಳ ಪ್ರಕಾರ, ಮಾಮೆರೆ ಬಂದರು ಟರ್ಮಿನಲ್ನ ಕಾಯುವ ಕೊಠಡಿಯೂ ಕುಸಿದಿದೆ.
ಸೇಂಟ್ ಪೀಟರ್ ಮೇಜರ್ ಸೆಮಿನರಿಯಲ್ಲೂ ಭೂಕಂಪದ ವೇಳೆ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಭಾಂಗಣದ ಮೇಲ್ಛಾವಣಿ ಕುಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸನ್ಯಾಸಿನಿಯರು ಆತಂಕದಿಂದ ಹೊರಗೆ ಓಡಿಬಂದಿದ್ದಾರೆ. ಓರ್ವ ಪಾದ್ರಿಗೆ ಕಾಲು ಮುರಿತವಾಗಿದೆ ಎಂದು ತಿಳಿದುಬಂದಿದೆ.
ಇಂಡೋನೇಷ್ಯಾ ‘ರಿಂಗ್ ಆಫ್ ಫೈರ್’ ಪ್ರದೇಶದಲ್ಲಿರುವುದರಿಂದ ಇಲ್ಲಿ ಭೂಕಂಪ ಮತ್ತು ಜ್ವಾಲಾಮುಖಿ ಚಟುವಟಿಕೆಗಳು ಸಾಮಾನ್ಯವಾಗಿವೆ. 1992ರಲ್ಲಿ ಫ್ಲೋರೆಸ್ನಲ್ಲಿ ಸಂಭವಿಸಿದ ಪ್ರಬಲ ಭೂಕಂಪದ ಬಳಿಕ ಉಂಟಾದ ಸುನಾಮಿಗೆ ಸುಮಾರು 2,500 ಮಂದಿ ಮೃತಪಟ್ಟಿದ್ದರು. 2018ರ 7.5 ತೀವ್ರತೆಯ ಭೂಕಂಪ ಹಾಗೂ ಸುನಾಮಿಗೂ ಸಾವಿರಾರು ಮಂದಿ ಬಲಿಯಾಗಿದ್ದರು. ಇದೀಗ ಮತ್ತೊಮ್ಮೆ ಭೂಕಂಪ ಮತ್ತು ಸುನಾಮಿ ಅಲೆಗಳು ಭಾರೀ ಆತಂಕ ಸೃಷ್ಟಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
