
ಸಿಎಂ ನಮಗೆ 10 ಟಾಸ್ಕ್ ಹಾಗೂ 100 ದಿನಗಳ ಟಾರ್ಗೆಟ್ ಕೊಟ್ಟಿದ್ದಾರೆ : ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ: ಹೊಸ ಮುಖ್ಯಮಂತ್ರಿ ನಮಗೆ 100 ದಿನಗಳ ಟಾರ್ಗೆಟ್ ನೀಡಿದ್ದು, 10 ಪ್ರಮುಖ ಟಾಸ್ಕ್‌ಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಹೊಸದಾಗಿ ‘ಪ್ರಜಾಸೇವೆ’ ಖಾತೆ ಆರಂಭಿಸಲಾಗುತ್ತಿದ್ದು, ಸದ್ಯ ಈ ಖಾತೆಗೆ ಸಚಿವರ ನೇಮಕವಾಗಿಲ್ಲ. ಇನ್ನೂ ಹಲವು ಖಾತೆಗಳ ಹಂಚಿಕೆಯೂ ಬಾಕಿ ಇದೆ. ಯಾರು ಸಮಯ ನೀಡಲು ಸಾಧ್ಯವೋ ಅವರಿಗೆ ಪ್ರಜಾಸೇವೆ ಇಲಾಖೆ ನೀಡಲಾಗುವುದು ಎಂದರು.
ನೂರು ದಿನಗಳ ಒಳಗಾಗಿ ಮುಖ್ಯಮಂತ್ರಿ ನೀಡಿರುವ ಟಾಸ್ಕ್‌ಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುವುದಾಗಿ ಸತೀಶ್ ಜಾರಕಿಹೊಳಿ ತಿಳಿಸಿದರು.
ಮಹಿಳಾ ಸಚಿವ ಸ್ಥಾನಕ್ಕೆ ಮೂವರ ಹೆಸರು
ಮಹಿಳಾ ಸಚಿವರ ನೇಮಕ ವಿಚಾರದಲ್ಲಿ ಗೊಂದಲವಿದೆ. ರಾಜ್ಯದಲ್ಲಿರುವ ಎಲ್ಲಾ ಮಹಿಳಾ ಶಾಸಕರು ಸಮರ್ಥರಾಗಿದ್ದಾರೆ. ಸಚಿವ ಸ್ಥಾನದ ರೇಸ್‌ನಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಉಮಾಶ್ರೀ ಹಾಗೂ ಗಾಯತ್ರಿ ಅವರ ಹೆಸರುಗಳಿವೆ. ಯಾರನ್ನು ಸಚಿವರನ್ನಾಗಿ ಮಾಡಲಾಗುತ್ತದೆಯೋ ಅವರ ಪರವಾಗಿ ನಾವು ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಅಧಿವೇಶನ ಮುಗಿದ ಬಳಿಕ ಮಹಿಳೆಯರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ. ಯಾರನ್ನು ಸಚಿವರನ್ನಾಗಿ ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು.
ಜಮೀರ್ ಧ್ವಜಾರೋಹಣ ವಿವಾದ
ಸಚಿವ ಜಮೀರ್ ಅಹ್ಮದ್ ಧ್ವಜಾರೋಹಣಕ್ಕೆ ಹಿಂದೇಟು ಹಾಕಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಜಮೀರ್ ಅವರು ಮುಖ್ಯವಾಗಿ ಪತ್ರದಲ್ಲಿ ಬರೆದಿರುವ ವಿಚಾರ ಹಾಗೂ ಬಿಬಿಎಂಪಿ ಚುನಾವಣೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ಅವರನ್ನೇ ಕೇಳಬೇಕು ಎಂದರು.
ಬಿಜೆಪಿಯವರ ಆರೋಪಕ್ಕೆ ತಿರುಗೇಟು ನೀಡಿದ ಅವರು, ತಮ್ಮ ಕಚೇರಿಯಲ್ಲಿಯೇ ಬಿಜೆಪಿ ನಾಯಕರು ಧ್ವಜ ಹಾರಿಸುವುದಿಲ್ಲ. ಹೀಗಾಗಿ ನಮ್ಮ ಮೇಲೆ ಆರೋಪ ಮಾಡಲು ಅವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಹೇಳಿದರು.
ಬಿಬಿಎಂಪಿ ಚುನಾವಣೆ ಬರುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಕಳೆದ 70 ವರ್ಷಗಳಲ್ಲಿ ಇಂತಹ ಸಾಕಷ್ಟು ಘಟನೆಗಳು ನಡೆದಿವೆ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿಯಲ್ಲಿ ಬರ ವೀಕ್ಷಣೆ
ಬೆಳಗಾವಿ ಜಿಲ್ಲೆಯ ಬರ ಪರಿಸ್ಥಿತಿ ಕುರಿತು ಮಾತನಾಡಿದ ಅವರು, ನಾಳೆ ಯರಗಟ್ಟಿ, ಸವದತ್ತಿ ಹಾಗೂ ರಾಮದುರ್ಗ ತಾಲೂಕುಗಳಲ್ಲಿ ಬರ ವೀಕ್ಷಣೆ ನಡೆಸುವುದಾಗಿ ತಿಳಿಸಿದರು.
ಸದ್ಯ ಈ ಮೂರು ತಾಲೂಕುಗಳಲ್ಲಿ ಮಾತ್ರ ಸಮಸ್ಯೆ ಇದೆ. ಮೂರು ತಾಲೂಕುಗಳಲ್ಲಿ ಬರ ವೀಕ್ಷಣೆ ನಡೆಸಿ, ಬಳಿಕ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ಕರ್ನಾಟಕ ಅವಿಭಾಜ್ಯ ಅಂಗದ ಠರಾವಿಗೆ ಪಾಲಿಕೆ ಹಿಂದೇಟು?
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಠರಾವನ್ನು ಪಾಲಿಕೆಯಲ್ಲಿ ಮಂಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಕಳೆದ ಮೂರು ತಿಂಗಳಿಂದ ಪಾಲಿಕೆ ಸಭೆ ನಡೆದಿಲ್ಲ. ಉದ್ದೇಶಪೂರ್ವಕವಾಗಿಯೇ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದರು.
ಈ ವಿಚಾರಕ್ಕೆ ಮಾಧ್ಯಮಗಳು ಹೆಚ್ಚಿನ ಬೆಳಕು ಚೆಲ್ಲಬೇಕು. ಅವರಿಗೆ ಈ ಬಗ್ಗೆ ಆಸಕ್ತಿ ಇಲ್ಲ. ಉದ್ದೇಶಪೂರ್ವಕವಾಗಿಯೇ ಸಭೆ ನಡೆಸುತ್ತಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
