Top Storiesಬೆಂಗಳೂರು ಗ್ರಾಮಾಂತರ

ಖಾನಾಪುರದಲ್ಲಿ ನಕಲಿ ವೈದ್ಯರ ಹಾವಳಿ ಆರೋಪ..!

ಖಾನಾಪುರ: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಗ್ರಾಮೀಣ ಭಾಗದಲ್ಲಿ ಯಾವುದೇ ವೈದ್ಯಕೀಯ ಅರ್ಹತೆ ಇಲ್ಲದವರು ಮನಸೋಇಚ್ಛೆ ಚಿಕಿತ್ಸೆ ನೀಡುತ್ತಿದ್ದಾರೆ ಎನ್ನಲಾಗಿದ್ದು, ಇದರಿಂದ ಅಮಾಯಕ ಗ್ರಾಮಸ್ಥರ ಜೀವದ ಜೊತೆ ಚೆಲ್ಲಾಟ ನಡೆಯುತ್ತಿದೆಯೇ ಎಂಬ ಪ್ರಶ್ನೆ ಇದೀಗ ಎದ್ದಿದೆ.

ಖಾನಾಪುರ ತಾಲೂಕಿನ ಮೊದೆಕೊಪ್ಪ, ಕಾನ್ಸೂಲಿ ಸೇರಿದಂತೆ ಹಲವು ಗ್ರಾಮಗಳಲ್ಲಿ ‘ಕಾಳೆ’ ಎಂಬ ವ್ಯಕ್ತಿ ಯಾವುದೇ ವೈದ್ಯಕೀಯ ಅರ್ಹತೆ ಇಲ್ಲದಿದ್ದರೂ ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಏಳನೇ ತರಗತಿ ವಿದ್ಯಾಭ್ಯಾಸ ಮಾಡಿರುವ ವ್ಯಕ್ತಿ ಎನ್ನಲಾಗಿರುವ ಈತನಿಂದ ಮನಸೋಇಚ್ಛೆ ಇಂಜೆಕ್ಷನ್ ನೀಡುವುದು, ಔಷಧಗಳನ್ನು ನೀಡುವುದು ಸೇರಿದಂತೆ ವೈದ್ಯಕೀಯ ಚಿಕಿತ್ಸೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಈ ಬಗ್ಗೆ ಸ್ಥಳೀಯರು ಖಾನಾಪುರ ತಾಲೂಕು ಆರೋಗ್ಯಾಧಿಕಾರಿ ಮಹೇಶ ಕಿವಡಸನ್ನವರ ಅವರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಆದರೆ ಮಾಹಿತಿ ನೀಡಿದ ಬಳಿಕ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುವ ಬದಲು, ಲಿಖಿತ ದೂರು ನೀಡಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಇದರಿಂದ ಸ್ಥಳೀಯರಲ್ಲಿ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ.ನಕಲಿ ವೈದ್ಯರ ಬಗ್ಗೆ ಮಾಹಿತಿ ಸಿಕ್ಕಾಗ ಆರೋಗ್ಯ ಇಲಾಖೆ ಸ್ವಯಂಪ್ರೇರಿತವಾಗಿ ಪರಿಶೀಲನೆ ನಡೆಸಬೇಕಲ್ಲವೇ?ಜನರ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇರುವ ವಿಚಾರದಲ್ಲೂ ದೂರು ಪತ್ರಕ್ಕಾಗಿ ಕಾಯಬೇಕೇ?ಎಂಬ ಪ್ರಶ್ನೆಗಳನ್ನು ಸ್ಥಳೀಯರು ಎತ್ತುತ್ತಿದ್ದಾರೆ.

ಇನ್ನು, ಖಾನಾಪುರ ತಾಲೂಕಿನಲ್ಲಿ ನಕಲಿ ವೈದ್ಯರ ವಿರುದ್ಧ ಸಮರ್ಪಕ ಕಾರ್ಯಾಚರಣೆ ನಡೆಯುತ್ತಿಲ್ಲ ಎಂಬ ಆರೋಪಗಳು ಈ ಹಿಂದೆಯೂ ಕೇಳಿಬಂದಿವೆ ಎನ್ನಲಾಗಿದೆ. ಅರ್ಹತೆ ಇಲ್ಲದ ವ್ಯಕ್ತಿಗಳಿಂದ ಚಿಕಿತ್ಸೆ ಮುಂದುವರಿದರೆ, ತಪ್ಪು ಔಷಧ ಅಥವಾ ತಪ್ಪು ಚಿಕಿತ್ಸೆಯಿಂದ ರೋಗಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕವಿದೆ.

ರಾಜ್ಯದಲ್ಲಿ ನಕಲಿ ವೈದ್ಯರು ಹಾಗೂ ನಕಲಿ ಔಷಧಗಳ ವಿರುದ್ಧ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಸಂದರ್ಭದಲ್ಲಿ, ಖಾನಾಪುರದಲ್ಲಿ ಮಾತ್ರ ಅಧಿಕಾರಿಗಳ ಕಾರ್ಯವೈಖರಿ ಏಕೆ ನಿಧಾನವಾಗಿದೆ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ನಕಲಿ ಔಷಧಗಳ ತಯಾರಿಕೆ, ದಾಸ್ತಾನು, ಮಾರಾಟ ಹಾಗೂ ಪೂರೈಕೆಯ ಬಗ್ಗೆ ಮಾಹಿತಿ ನೀಡುವ ಸಾರ್ವಜನಿಕರಿಗೆ ₹10 ಸಾವಿರದಿಂದ ₹50 ಸಾವಿರದವರೆಗೆ ಬಹುಮಾನ ನೀಡುವ ಕ್ರಮವನ್ನು ಸರ್ಕಾರ ಕೈಗೊಂಡಿದೆ ಎನ್ನಲಾಗಿದೆ.

ಹೀಗಿರುವಾಗ, ಸಾರ್ವಜನಿಕರಿಂದ ಬರುತ್ತಿರುವ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿ ಸ್ಥಳ ಪರಿಶೀಲನೆ, ವೈದ್ಯಕೀಯ ಅರ್ಹತೆ ಪರಿಶೀಲನೆ ಹಾಗೂ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕಾದ ಜವಾಬ್ದಾರಿ ಆರೋಗ್ಯ ಇಲಾಖೆಯ ಮೇಲಿದೆ.ಹೀಗಾಗಿ ಖಾನಾಪುರ ತಾಲೂಕಿನ ಮೊದೆಕೊಪ್ಪ, ಕಾನ್ಸೂಲಿ ಸೇರಿದಂತೆ ಆರೋಪ ಕೇಳಿಬಂದಿರುವ ಗ್ರಾಮಗಳಲ್ಲಿ ತಕ್ಷಣ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ನಿಜಾಂಶವನ್ನುಬಹಿರಂಗಪಡಿಸಬೇಕು.ನಕಲಿ ವೈದ್ಯರು ಯಾರೇ ಆಗಿರಲಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

Share with Friends
author avatar
Digital Desk