
ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಕೈಕೊಟ್ಟ ಯುವಕ?
ಕಾಗವಾಡ: ಮದುವೆಯಾಗುವುದಾಗಿ ನಂಬಿಸಿ ಕಳೆದ ಹಲವು ವರ್ಷಗಳಿಂದ ಪ್ರೀತಿಸಿ, ಸುಮಾರು ಆರು ತಿಂಗಳ ಕಾಲ ಯುವತಿಯೊಂದಿಗೆ ಬೆಳಗಾವಿಯಲ್ಲಿ ವಾಸವಿದ್ದು, ಇದೀಗ ಮದುವೆಯಾಗುವುದಿಲ್ಲ ಎಂದು ಯುವಕನೊಬ್ಬ ಮೋಸ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಚಿಕ್ಕೋಡಿಯ ಕಾಗವಾಡದ ಪಟ್ಟಣದ ಮೇಘಾ ಎಂಬ ಯುವತಿ, ಉಪ್ಪಾರವಾಡಿ ಗ್ರಾಮದ ಅಕ್ಷಯ ಸುಕುಮಾರ ಉಪ್ಪಾರ ಎಂಬ ಯುವಕನ ವಿರುದ್ಧ ಈ ಆರೋಪ ಮಾಡಿದ್ದಾಳೆ.
ಮದುವೆಯಾಗುವುದಾಗಿ ನಂಬಿಸಿ ತನ್ನನ್ನು ಎಲ್ಲ ರೀತಿಯಲ್ಲೂ ಬಳಸಿಕೊಂಡು ಇದೀಗ ಮದುವೆಯಾಗಲು ನಿರಾಕರಿಸುತ್ತಿದ್ದಾನೆ ಎಂದು ಮೇಘಾ ಆರೋಪಿಸಿದ್ದಾಳೆ. ಇದರಿಂದ ಅನ್ಯಾಯವಾಗಿದೆ ಎಂದು ಕಣ್ಣೀರಿಡುತ್ತಾ, ಯುವಕನ ಮನೆ ಮುಂದೆ ಅಳಲು ತೋಡಿಕೊಂಡಿದ್ದಾಳೆ.
ಇನ್ನು, ಯುವಕ ಮದುವೆಯಾಗುವವರೆಗೂ ಆತನ ಮನೆಯಿಂದ ಹೊರಗೆ ಹೋಗುವುದಿಲ್ಲ ಎಂದು ಮೇಘಾ ಪಟ್ಟು ಹಿಡಿದಿದ್ದರಿಂದ ಉಪ್ಪಾರವಾಡಿಯಲ್ಲಿರುವ ಅಕ್ಷಯ ಸುಕುಮಾರ ಉಪ್ಪಾರನ ಮನೆಯಲ್ಲಿ ಕೆಲಕಾಲ ಹೈಡ್ರಾಮಾ ನಡೆದಿದೆ.
ಈ ವೇಳೆ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಯುವತಿಯ ಕೈಯಲ್ಲಿದ್ದ ಮೊಬೈಲ್ ಫೋನ್ ಕಿತ್ತುಕೊಂಡು ಒಡೆದಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಘಟನೆ ಕಾಗವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಯುವತಿ ಮಾಡಿರುವ ಆರೋಪಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಪ್ರಕರಣದ ಸಂಪೂರ್ಣ ಸತ್ಯಾಂಶ ತನಿಖೆಯಿಂದ ಹೊರಬರಬೇಕಿದೆ.
