LatestTop Storiesಜಿಲ್ಲಾ ಸುದ್ದಿಗಳು | District Newsಬೆಳಗಾವಿ-Belagavi

ಗಾಳಿಪಟದ ಮಾಂಜಾ ದಾರಕ್ಕೆ ಸಿಲುಕಿ ವಿದ್ಯಾರ್ಥಿ ಸಾ*..!

ಬೆಳಗಾವಿ.ಅ.1- ಗಾಳಿಪಟ ಹಾರಿಸಲು ಬಳಸುವ ಮಾಂಜಾ ದಾರಕ್ಕೆ ಸಿಲುಕಿ ೧೯ ವರ್ಷದ ವಿದ್ಯಾರ್ಥಿಯೊಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಳಗಾವಿಯ ಗಾಂಧಿನಗರ ಸಮೀಪದ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಬೆಳಗಾವಿಯ ಮಹಾಂತೇಶ ನಗರದ ನಿವಾಸಿ ಧ್ರುವ ಸಂತೋಷ ಕರ್ಜಗಿ (೧೯) ಎಂದು ಗುರುತಿಸಲಾಗಿದೆ.

ಧ್ರುವ ಖಾಸಗಿ ಕಾಲೇಜಿನಲ್ಲಿ ಐಟಿಐ ವ್ಯಾಸಂಗ ಮಾಡುತ್ತಿದ್ದು,ಪರೀಕ್ಷೆ ಮುಗಿಸಿಕೊಂಡು ಸಂಬಂಧಿಯ ಬೈಕ್ ಪಡೆದು ಮನೆಗೆ ಮರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಗಾಂಧಿನಗರ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗ ಏಕಾಏಕಿ ಗಾಳಿಪಟದ ಮಾಂಜಾ ದಾರ ಧ್ರುವನ ಕುತ್ತಿಗೆಗೆ ಸಿಲುಕಿದೆ. ಪರಿಣಾಮ ಕುತ್ತಿಗೆಗೆ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವ ಉಂಟಾಗಿದೆ.ರಕ್ತಸ್ರಾವದಿಂದ ಧ್ರುವ ಬೈಕ್ ಮೇಲೆಯೇ ಪ್ರಾಣ ಬಿಟ್ಟಿದ್ದಾನೆ.

ಪರೀಕ್ಷೆ ಮುಗಿಸಿ ಮನೆಗೆ ಸಂತೋಷದಿಂದ ಮರಳಬೇಕಿದ್ದ ಯುವಕನ ಬದುಕು ಮಾಂಜಾ ದಾರಕ್ಕೆ ಬಲಿಯಾಗಿರುವುದು ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ತೀವ್ರ ಶೋಕಕ್ಕೆ ಕಾರಣವಾಗಿದೆ.

ಘಟನಾ ಸ್ಥಳಕ್ಕೆ ಬೆಳಗಾವಿ ಉತ್ತರ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಉತ್ತರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

Share with Friends
author avatar
Digital Desk