LatestTop Storiesಬೆಂಗಳೂರು-Bengaluru

ಬೆಂಗಳೂರಿನಲ್ಲಿ ಬಹುಮಹಡಿ ಪಾರ್ಕಿಂಗ್ ಮಳಿಗೆಗಳ ಬಾಡಿಗೆ ಹೆಚ್ಚಳಕ್ಕೆ ವ್ಯಾಪಾರಿಗಳ ವಿರೋಧ

ಬೆಂಗಳೂರು.ಅ.1- ಗಾಂಧಿ ಬಜಾರ್ ಬಹುಮಹಡಿ ಪಾರ್ಕಿಂಗ್ ಕಟ್ಟಡದಲ್ಲಿರುವ45 ಮಳಿಗೆಗಳ ಬಾಡಿಗೆ ದರವನ್ನು ಹೆಚ್ಚಿಸಿರುವುದಕ್ಕೆ ಸಣ್ಣ ವ್ಯಾಪಾರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪ್ರತಿ ಚದರ ಅಡಿಗೆ ಸುಮಾರು 577.55 ಬಾಡಿಗೆ ನಿಗದಿಪಡಿಸಲಾಗಿದ್ದು,ಇದು ಹಿಂದಿನ ದರಕ್ಕಿಂತ ಸುಮಾರು ೭೦ರಷ್ಟು ಹೆಚ್ಚಳವಾಗಿದೆ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ. ಏಕಾಏಕಿ ಇಷ್ಟೊಂದು ಪ್ರಮಾಣದಲ್ಲಿ ಬಾಡಿಗೆ ಹೆಚ್ಚಿಸಿರುವುದರಿಂದ ಸಣ್ಣ ವ್ಯಾಪಾರಿಗಳ ಜೀವನೋಪಾಯದ ಮೇಲೆ ಗಂಭೀರ ಆರ್ಥಿಕ ಪರಿಣಾಮ ಉಂಟಾಗಲಿದೆ ಎಂದು ಹೇಳಿದ್ದಾರೆ.

ಬಾಡಿಗೆ ದರ ನಿಗದಿಪಡಿಸುವಾಗ ಯಾವ ಮಾನದಂಡಗಳನ್ನು ಅನುಸರಿಸಲಾಗಿದೆ.ಮಾರುಕಟ್ಟೆ ದರದ ಆಧಾರದ ಮೇಲೆ ವೈಜ್ಞಾನಿಕ ಮೌಲ್ಯಮಾಪನ ನಡೆಸಲಾಗಿದೆಯೇ? ದರ ನಿಗದಿಗೆ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯಲಾಗಿದೆಯೇ? ಎಂಬ ಪ್ರಶ್ನೆಗಳನ್ನು ವ್ಯಾಪಾರಿಗಳು ಎತ್ತಿದ್ದಾರೆ.

ಅಲ್ಲದೆ, ಬಾಡಿಗೆ ದರ ನಿಗದಿ ವರದಿ, ಕಡತ ಟಿಪ್ಪಣಿಗಳು, ಮೌಲ್ಯಮಾಪನ ದಾಖಲೆಗಳು ಹಾಗೂ ಸಂಬಂಧಿತ ಅನುಮೋದನೆಗಳನ್ನು ಸಾರ್ವಜನಿಕ ಪರಿಶೀಲನೆಗೆ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.ಟೆಂಡರ್ ಪ್ರಕ್ರಿಯೆಯಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ ಹಾಗೂ ಸಂಬಂಧಿತ ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬುದನ್ನೂ ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗಪಡಿಸಬಹುದಾದ ದಾಖಲೆಗಳನ್ನು ಸಾರ್ವಜನಿಕರಿಗೆ ಒದಗಿಸುವ ಮೂಲಕ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಖಚಿತಪಡಿಸಬೇಕು ಎಂದು ವ್ಯಾಪಾರಿಗಳು ಒತ್ತಾಯಿಸಿದ್ದಾರೆ.

ಬಾಡಿಗೆ ದರ ನಿಗದಿ ಮತ್ತು ಟೆಂಡರ್ ಪ್ರಕ್ರಿಯೆ ಕುರಿತು ಸ್ವತಂತ್ರ ಹಾಗೂ ಸಮಗ್ರ ತನಿಖೆ ನಡೆಸಬೇಕು.ತನಿಖೆ ಪೂರ್ಣಗೊಳ್ಳುವವರೆಗೆ ಪ್ರಸ್ತುತ ಟೆಂಡರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು. ತನಿಖೆಯಲ್ಲಿ ದರ ನಿಗದಿಯಲ್ಲಿ ಲೋಪಗಳು ಅಥವಾ ನಿಯಮ ಉಲ್ಲಂಘನೆಗಳು ಕಂಡುಬಂದರೆ, ಅಗತ್ಯವಿದ್ದಲ್ಲಿ ಪ್ರಸ್ತುತ ಟೆಂಡರ್ ರದ್ದುಪಡಿಸಿ ನ್ಯಾಯಸಮ್ಮತ ದರದಲ್ಲಿ ಹೊಸ ಟೆಂಡರ್ ಕರೆಯಬೇಕು ಎಂದು ವ್ಯಾಪಾರಿಗಳು ಆಗ್ರಹಿಸಿದ್ದಾರೆ.

ಇದೇ ವೇಳೆ, ಎಇಇ ಪ್ರದೀಪ್ ಕುಮಾರ್ ಪಾತ್ರದ ಬಗ್ಗೆಯೂ ಇಲಾಖಾ ಮಟ್ಟದಲ್ಲಿ ತನಿಖೆ ನಡೆಸಬೇಕು ಎಂದು ವ್ಯಾಪಾರಿಗಳು ಒತ್ತಾಯಿಸಿದ್ದಾರೆ. ಯಾವುದೇ ನಿಯಮ ಉಲ್ಲಂಘನೆ ಅಥವಾ ಪ್ರಕ್ರಿಯಾತ್ಮಕ ಲೋಪಗಳು ಪತ್ತೆಯಾದರೆ, ಸಂಬಂಧಪಟ್ಟವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಬಾಡಿಗೆ ದರ ನಿಗದಿ ಪ್ರಕ್ರಿಯೆಯ ಸಂಪೂರ್ಣ ದಾಖಲೆಗಳನ್ನು ಬಹಿರಂಗಪಡಿಸಿ,ವ್ಯಾಪಾರಿಗಳ ಆಕ್ಷೇಪಣೆ ಪರಿಗಣಿಸಿ ನ್ಯಾಯಸಮ್ಮತ ಹಾಗೂ ಪಾರದರ್ಶಕ ನಿರ್ಧಾರ ಕೈಗೊಳ್ಳಬೇಕು ಎಂಬುದು ವ್ಯಾಪಾರಿಗಳ ಪ್ರಮುಖ ಬೇಡಿಕೆಯಾಗಿದೆ.

Share with Friends
author avatar
Digital Desk