
ಮನೆ ಮುಂದೆ ವಾಹನ ನಿಲ್ಲಿಸುವುದಕ್ಕೆ ಶುಲ್ಕ ವಿಧಿಸುವ ಪ್ರಸ್ತಾವನೆಗೆ ತಡೆ
ಬೆಂಗಳೂರು.ಅ.14- ಮನೆಗಳ ಮುಂದೆ ವಾಹನ ನಿಲ್ಲಿಸುವುದಕ್ಕೂ ಶುಲ್ಕ ವಿಧಿಸುವ ಪ್ರಸ್ತಾವನೆಗೆ ಸದ್ಯಕ್ಕೆ ತಡೆ ಬಿದ್ದಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರೂಪಿಸಿದ್ದ ಪಾರ್ಕಿಂಗ್ ನೀತಿಯನ್ನು ನಗರಾಭಿವೃದ್ಧಿ ಇಲಾಖೆ ತಡೆಹಿಡಿದಿದ್ದು, ಇದರಿಂದ ಬೆಂಗಳೂರಿನ ವಾಹನ ಮಾಲೀಕರಿಗೆ ತಾತ್ಕಾಲಿಕ ನಿರಾಳತೆ ಸಿಕ್ಕಿದೆ.
ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಮತ್ತು ಪಾರ್ಕಿಂಗ್ ಸಮಸ್ಯೆಯನ್ನು ನಿಯಂತ್ರಿಸುವ ಉದ್ದೇಶದಿಂದ ಜಿಬಿಎ ಹೊಸ ಪಾರ್ಕಿಂಗ್ ನೀತಿಯನ್ನು ರೂಪಿಸಿತ್ತು. ಈ ನೀತಿಯ ಭಾಗವಾಗಿ ಮನೆಗಳ ಮುಂದೆ ವಾಹನ ನಿಲ್ಲಿಸಿದರೂ ಶುಲ್ಕ ವಿಧಿಸುವ ಪ್ರಸ್ತಾವನೆಯನ್ನು ಸಿದ್ಧಪಡಿಸಿ ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಲಾಗಿತ್ತು.
ಈ ಪ್ರಸ್ತಾವನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. ಮನೆ ಮುಂದೆ ವಾಹನ ನಿಲ್ಲಿಸಲೂ ಹಣ ಪಾವತಿಸಬೇಕಾದ ಪರಿಸ್ಥಿತಿ ಎದುರಾಗಬಹುದು ಎಂಬ ಕಾರಣಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಪಾರ್ಕಿಂಗ್ ನೀತಿಯ ಕುರಿತು ಸಾರ್ವಜನಿಕರ ಅಭಿಪ್ರಾಯ ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದ್ದು, ಸಾವಿರಾರು ಜನರು ಪ್ರಸ್ತಾವಿತ ನೀತಿಯ ವಿರುದ್ಧ ಆಕ್ಷೇಪಣೆ ಸಲ್ಲಿಸಿದ್ದರು.
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಆಸ್ತಿ ತೆರಿಗೆ ಸೇರಿದಂತೆ ವಿವಿಧ ಆರ್ಥಿಕ ಹೊರೆಗಳನ್ನು ಎದುರಿಸುತ್ತಿರುವ ಜನರಿಗೆ ಪಾರ್ಕಿಂಗ್ ಶುಲ್ಕ ಮತ್ತಷ್ಟು ಹೊರೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಮನೆಗಳ ಮುಂದೆ ವಾಹನ ನಿಲ್ಲಿಸುವುದಕ್ಕೂ ಶುಲ್ಕ ವಿಧಿಸಿದರೆ ಮಧ್ಯಮ ವರ್ಗದವರು ಮತ್ತು ಸಾಮಾನ್ಯ ವಾಹನ ಮಾಲೀಕರಿಗೆ ತೊಂದರೆಯಾಗಲಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದರು.
ಸಾರ್ವಜನಿಕರ ವಿರೋಧದ ನಡುವೆಯೇ ನಗರಾಭಿವೃದ್ಧಿ ಇಲಾಖೆ ಪಾರ್ಕಿಂಗ್ ನೀತಿಗೆ ತಡೆ ನೀಡಿದೆ. ಹೀಗಾಗಿ, ಮನೆಗಳ ಮುಂದೆ ವಾಹನ ನಿಲ್ಲಿಸುವುದಕ್ಕೆ ಶುಲ್ಕ ವಿಧಿಸುವ ಪ್ರಸ್ತಾವನೆ ಸದ್ಯಕ್ಕೆ ಮುಂದುವರಿದಿಲ್ಲ ಎಂಬ ನಿರಾಳತೆ ವಾಹನ ಮಾಲೀಕರಲ್ಲಿ ಮೂಡಿದೆ.
ಆದರೆ, ಬೆಂಗಳೂರಿನ ಪಾರ್ಕಿಂಗ್ ಸಮಸ್ಯೆ ಇನ್ನೂ ಬಗೆಹರಿಯಬೇಕಿದೆ. ವಾಹನಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಯಾಗದಂತೆ ಪಾರ್ಕಿಂಗ್ ವ್ಯವಸ್ಥೆಯನ್ನು ಸುಧಾರಿಸುವುದು ಜಿಬಿಎಗೆ ಪ್ರಮುಖ ಸವಾಲಾಗಿದೆ. ಸಾರ್ವಜನಿಕರಿಗೆ ಹೆಚ್ಚುವರಿ ಆರ್ಥಿಕ ಹೊರೆ ವಿಧಿಸದೆ, ನಗರದ ಪಾರ್ಕಿಂಗ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವAತಹ ನೀತಿಯನ್ನು ರೂಪಿಸಬೇಕೆಂಬುದು ನಾಗರಿಕರ ಒತ್ತಾಯವಾಗಿದೆ.
