LatestTop Storiesಬೆಂಗಳೂರು-Bengaluru

ಆಂಬುಲೆನ್ಸ್ ಹೊರಗುತ್ತಿಗೆ ನೌಕರರ ಮುಷ್ಕರದ ಎಚ್ಚರಿಕೆ

ಬೆಂಗಳೂರು.ಅ.14- ಕಳೆದ ಎರಡು ತಿಂಗಳಿಂದ ವೇತನ ಪಾವತಿಯಾಗದಿರುವುದು, ವೇತನ ಪರಿಷ್ಕರಣೆ ಹಾಗೂ ಕೆಲಸದ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಂಬುಲೆನ್ಸ್ ಹೊರಗುತ್ತಿಗೆ ನೌಕರರು ಹೋರಾಟದ ಹಾದಿ ಹಿಡಿದಿದ್ದಾರೆ.
ಇಂದಿನಿಂದ ಸಾಮೂಹಿಕ ಗೈರುಹಾಜರಾಗಲು ಸಿಬ್ಬಂದಿ ನಿರ್ಧರಿಸಿದ್ದು, ಅಕ್ಟೋಬರ್ 22ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಅಂಬುಲೆನ್ಸ್ ಹೊರಗುತ್ತಿಗೆ ನೌಕರರ ಸಂಘದ ಉಪಾಧ್ಯಕ್ಷ ಪರಮ ಶಿವಯ್ಯ ಮಾತನಾಡಿ, ಕಳೆದ ಎರಡು ತಿಂಗಳಿಂದ ಸಿಬ್ಬಂದಿಗೆ ವೇತನ ಪಾವತಿಯಾಗಿಲ್ಲ. ತಿಂಗಳಿಗೆ ಕೇವಲ 12 ಸಾವಿರ ರೂಪಾಯಿ ಸಂಬಳದಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ. ಕಳೆದ ಒಂಬತ್ತು ವರ್ಷಗಳಿಂದ ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಹೀಗಾಗಿ ಸಿಬ್ಬಂದಿಯ ಕೆಲಸದ ಭದ್ರತೆ ಹಾಗೂ ವೇತನದ ವಿಚಾರದಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಮುಂದುವರಿಸಬೇಕು ಹಾಗೂ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ನೌಕರರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸರ್ಕಾರ ಲಿಖಿತ ಭರವಸೆ ನೀಡಿದರೆ ಹೋರಾಟವನ್ನು ಹಿಂಪಡೆಯಲು ಸಿದ್ಧವಿರುವುದಾಗಿ ಸಂಘದ ಪ್ರತಿನಿಧಿಗಳು ತಿಳಿಸಿದ್ದಾರೆ. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಜಿವಿಕೆ ಕಚೇರಿಯಲ್ಲಿ ಮಹತ್ವದ ಸಭೆ :

ಅಂಬುಲೆನ್ಸ್ ನೌಕರರ ಮುಷ್ಕರದ ಎಚ್ಚರಿಕೆ ಹಿನ್ನೆಲೆಯಲ್ಲಿ ಜಿವಿಕೆ ಕಚೇರಿಯಲ್ಲಿ ಆಡಳಿತ ಮಂಡಳಿಯ ಸಭೆ ನಡೆಯುತ್ತಿದೆ. ಇಎಂಆರ್‌ಐ ಡೆಪ್ಯೂಟಿ ಡೈರೆಕ್ಟರ್ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಅಂಬುಲೆನ್ಸ್ ಗುತ್ತಿಗೆ ನೌಕರರ ಸಂಘದ ಸದಸ್ಯರೂ ಭಾಗವಹಿಸಲಿದ್ದಾರೆ.

ಈ ಯೋಜನೆಗೆ ಈಗಾಗಲೇ 174 ಕೋಟಿ ರೂಪಾಯಿ ಮೀಸಲಿಡಲಾಗಿದೆ.ಹೆಚ್ಚುವರಿಯಾಗಿ ಅನುದಾನ ಮೀಸಲಿಡುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ವೇತನ ಪರಿಷ್ಕರಣೆ, ಕೆಲಸದ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನೌಕರರು ಆಗ್ರಹಿಸುತ್ತಿದ್ದಾರೆ.

ಸಭೆಯಲ್ಲಿ ಮುಷ್ಕರದ ನಿರ್ಧಾರವನ್ನು ಕೈಬಿಡುವಂತೆ ಅಧಿಕಾರಿಗಳು ನೌಕರರಿಗೆ ಮನವಿ ಮಾಡುತ್ತಿದ್ದಾರೆ. ಸಭೆಯಲ್ಲಿ ಯಾವ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗದಿದ್ದರೆ ಅಕ್ಟೋಬರ್ 22ರಿಂದ ಫ್ರೀಡಂ ಪಾರ್ಕ್ನಲ್ಲಿ ಧರಣಿ ನಡೆಸಲು ನೌಕರರು ಸಿದ್ಧತೆ ನಡೆಸಿದ್ದಾರೆ.

Share with Friends
author avatar
Digital Desk