LatestTop Storiesಜಿಲ್ಲಾ ಸುದ್ದಿಗಳು | District Newsಬೀದರ್​-Bidar

ಅಕ್ರಮ ಹಣ ವರ್ಗಾವಣೆ ಆರೋಪ : ಸಮಗ್ರ ತನಿಖೆಗೆ ಈಶ್ವರ್ ಖಂಡ್ರೆ ಸೂಚನೆ

ಬೀದರ್.ಅ.9- ಜಿಲ್ಲೆಯ ಕಮಲನಗರ ತಾಲೂಕಿನ ಚಾಂದೂರಿ ಗ್ರಾಮ ಪಂಚಾಯಿತಿಯಲ್ಲಿ ನಕಲಿ ಸಹಿ ಬಳಸಿ 48.92 ಲಕ್ಷ ಸರ್ಕಾರಿ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿರುವ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಈ ಪ್ರಕರಣದಲ್ಲಿ ಚಾಂದೂರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೀಪಕ್ ಪಾಟೀಲ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ನಕಲಿ ಸಹಿ ಬಳಸಿ ವಿವಿಧ ವ್ಯಕ್ತಿಗಳ ಹೆಸರಿನ ಖಾತೆಗಳಿಗೆ ಸರ್ಕಾರಿ ಹಣ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಿಲ್ ಕಲೆಕ್ಟರ್ ಮಹಾದೇವ ತಂದೆ ಸಂಗ್ರಾಮ ಹಾಲಹಳ್ಕೆ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಮಹಾದೇವ ಪತ್ನಿ ನೀಡಿರುವ ಆರೋಪದ ಪ್ರಕಾರ,ಮಾಜಿ ಅಧ್ಯಕ್ಷ ದೀಪಕ್ ಪಾಟೀಲ್ ಅಕ್ರಮ ಹಣ ವರ್ಗಾವಣೆಗೆ ಕಾರಣಕರ್ತರು ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ದೀಪಕ್ ಪಾಟೀಲ್ ಅವರನ್ನು ವಶಕ್ಕೆ ಪಡೆದು
ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವ ಈಶ್ವರ ಖಂಡ್ರೆ, ಅಕ್ರಮದ ಕುರಿತು ಸಮಗ್ರ ತನಿಖೆ ನಡೆಸಿ 7 ದಿನಗಳೊಳಗೆ ವರದಿ ಸಲ್ಲಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒಗೆ ಸೂಚನೆ ನೀಡಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

48.92 ಲಕ್ಷದ ಹಣ ವರ್ಗಾವಣೆ ಪ್ರಕರಣದ ಹಿಂದೆ ಇನ್ನಷ್ಟು ಅಕ್ರಮಗಳು ಬೆಳಕಿಗೆ ಬರುತ್ತವೆಯೇ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.

Share with Friends
author avatar
Digital Desk