
ಆನ್‌ಲೈನ್ ಗೇಮ್ ಹೆಸರಿನಲ್ಲಿ ಹಣದ ಬೇಡಿಕೆ: 13ರ ಬಾಲಕ ಆತ್ಮಹತ್ಯೆ..!
ದಾವಣಗೆರೆ. ಅ.9- ಆನ್‌ಲೈನ್ ಗೇಮ್ ಐಡಿ ನೀಡುವುದಾಗಿ ಹೇಳಿ ಅಪ್ರಾಪ್ತ ಬಾಲಕನಿಂದ ಹಣ ಪಡೆದು, ಬಳಿಕ ಮತ್ತಷ್ಟು ಹಣ ನೀಡುವಂತೆ ಬೆದರಿಕೆ ಹಾಕಿ ಮಾನಸಿಕ ಹಾಗೂ ದೈಹಿಕವಾಗಿ ಹಿಂಸಿಸಿದ್ದರಿಂದ ಮನನೊಂದು ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪದ ಘಟನೆ ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕ ಮನೋಜ್ ಟಿ.ಆರ್. (13). ಬಸವ ಇಂಟರ್‌ನ್ಯಾಷನಲ್ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.ಪ್ರಕರಣಕ್ಕೆ ಸಂಬಂಧಿಸಿದಂತೆ ಮನು ಪಿ.ಆರ್., ಬೊಮ್ಮಲಿಂಗ ಹಾಗೂ ಕಾಲ್ಕೆರೆ ಗ್ರಾಮದ ಮಣಿ, ಸಂಜು ಮತ್ತು ಯಶವಂತ್ ಎಂಬ ಐವರ ವಿರುದ್ಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವಂತೆ, ಆರೋಪಿಗಳಲ್ಲಿ ಒಬ್ಬನಾದ ಮನು, ಆನ್‌ಲೈನ್ ಫ್ರೀ ಫೈರ್ ಗೇಮ್‌ನ ಐಡಿ ನೀಡುವುದಾಗಿ ಹೇಳಿ ಬಾಲಕನಿಂದ 6 ಸಾವಿರ ಪಡೆದಿದ್ದ.ಬಳಿಕ ಗೇಮ್ ಐಡಿ ವಿಚಾರವಾಗಿ ಮತ್ತಷ್ಟು ಹಣ ನೀಡುವಂತೆ ಒತ್ತಾಯಿಸಿ, ಬಾಲಕನನ್ನು ಬೈದು, ಹಲ್ಲೆ ಮಾಡಿ, ಬೈಕ್ ಹಾಗೂ ಕಾರಿನಲ್ಲಿ ಕರೆದೊಯ್ದು ಬೆದರಿಸುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಹಣ ನೀಡದಿದ್ದರೆ ಬಾಲಕ ಹಾಗೂ ಆತನ ಅಣ್ಣನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.ಆರೋಪಿಗಳ ಒತ್ತಡಕ್ಕೆ ಹೆದರಿದ ಬಾಲಕ,ಕುಟುಂಬದವರಿಗೆ ತಿಳಿಯದಂತೆ ಒಟ್ಟು 4.11 ಲಕ್ಷ ಹಣ ನೀಡಿದ್ದಾಗಿ ಪೋಷಕರಿಗೆ ತಿಳಿಸಿದ್ದ.
ವಿಷಯ ತಿಳಿದ ಬಳಿಕ ಕುಟುಂಬಸ್ಥರು ಹಾಗೂ ಗ್ರಾಮದ ಹಿರಿಯರು ಬಾಲಕನಿಗೆ ಧೈರ್ಯ ತುಂಬಿ, ಬುದ್ಧಿವಾದ ಹೇಳಿದ್ದರು.ಆದರೂ ಆತ ಮಾನಸಿಕವಾಗಿ ತೀವ್ರವಾಗಿ ಕುಗ್ಗಿದ್ದ.
ಅ.7ರಂದು ಸಂಜೆ ಮನೆಯಲ್ಲಿ ಯಾರೂ ಗಮನಿಸದ ವೇಳೆ ಬಾಲಕ ಕೋಣೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಘಟನೆಯಿಂದ ಪಾಂಡೋಮಟ್ಟಿ ಗ್ರಾಮದಲ್ಲಿ ಆಘಾತದ ವಾತಾವರಣ ನಿರ್ಮಾಣವಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.ಈ ಕುರಿತು ಚನ್ನಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದ ಡಿಆರ್‌ಐ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
