
ದೇವನಹಳ್ಳಿ ಏರ್ಪೋರ್ಟ್ನಲ್ಲಿ DRI ಭರ್ಜರಿ ಕಾರ್ಯಾಚರಣೆ: ಲಗೇಜ್ ಟ್ರ್ಯಾಲಿಗೆ ಅಂಟಿಸಿ ಚಿನ್ನ ಸಾಗಿಸುತ್ತಿದ್ದ ಜಾಲ ಪತ್ತೆ, ₹1.80 ಕೋಟಿ ಮೌಲ್ಯದ ಚಿನ್ನ ಜಪ್ತಿ
ದೇವನಹಳ್ಳಿ (ಬೆಂಗಳೂರು) : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಲಗೇಜ್ ಟ್ರ್ಯಾಲಿಯಲ್ಲಿ ವಿಶಿಷ್ಟವಾಗಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 1 ಕೋಟಿ 80 ಲಕ್ಷ ರೂಪಾಯಿ ಮೌಲ್ಯದ 1.3 ಕೆಜಿ ಚಿನ್ನದ ಬಿಸ್ಕೆಟ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಮಲೇಷ್ಯಾದ ಕೌಲಾಲಂಪುರ್ನಿಂದ ಆಗಮಿಸಿದ್ದ ಇಬ್ಬರು ಆರೋಪಿಗಳು ಅತ್ಯಂತ ಚಾಲಾಕಿತನದಿಂದ ಚಿನ್ನ ಸಾಗಿಸಲು ಯತ್ನಿಸಿದ್ದರು. ವಿಮಾನ ನಿಲ್ದಾಣದ ಒಳಗೆ ಪ್ರಯಾಣಿಕರು ಬಳಸುವ ಲಗೇಜ್ ಟ್ರ್ಯಾಲಿಯ ಕೆಳಭಾಗದಲ್ಲಿ ಯಾರಿಗೂ ಅನುಮಾನ ಬಾರದಂತೆ ಚಿನ್ನದ ಬಿಸ್ಕೆಟ್ಗಳನ್ನು ಅಂಟಿಸುತ್ತಿದ್ದರು. ಬಳಿಕ ಸಾಮಾನ್ಯ ಪ್ರಯಾಣಿಕರು ತಮಗೆ ಅರಿವಿಲ್ಲದೆಯೇ ಆ ಟ್ರ್ಯಾಲಿಗಳಲ್ಲಿ ಲಗೇಜ್ಗಳನ್ನು ಇಟ್ಟುಕೊಂಡು ಕಸ್ಟಮ್ಸ್ ತಪಾಸಣೆ ದಾಟಿ ಹೊರಬರುತ್ತಿದ್ದರು. ಈ ವೇಳೆ ಆರೋಪಿಗಳು ಆ ಪ್ರಯಾಣಿಕರನ್ನು ಹಿಂಬಾಲಿಸಿಕೊಂಡು ಬಂದು, ವಿಮಾನ ನಿಲ್ದಾಣದ ಹೊರಭಾಗದಲ್ಲಿ ಟ್ರ್ಯಾಲಿಯಿಂದ ಚಿನ್ನವನ್ನು ಪಡೆದುಕೊಳ್ಳುತ್ತಿದ್ದರು.
ಈ ಖಚಿತ ಮಾಹಿತಿಯನ್ನು ಪಡೆದ DRI ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು, 1.3 ಕೆಜಿ ಚಿನ್ನವನ್ನು ಜಪ್ತಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಜಾಲದ ಹಿನ್ನೆಲೆ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
