
ನಕಲಿ ಒಡವೆ ಇಟ್ಟು ಅಸಲಿ ಚಿನ್ನಾಭರಣ ಕಳವು: ಆರೋಪಿ ಬಂಧನ
ಬೆಂಗಳೂರು.ಸೆ.29- ಸಂಬಂಧಿಕರ ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ಗಮನಿಸಿ, ನಕಲಿ ಕೀ ಬಳಸಿ ಮನೆಗೆ ನುಗ್ಗಿ ಸುಮಾರು ೮ ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ೮ ಸಾವಿರ ನಗದು ಕಳವು ಮಾಡಿದ್ದ ಆರೋಪಿಯನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಅಶ್ವಥ್ ಕೆ. ಹೆಚ್. ಎಂದು ಗುರುತಿಸಲಾಗಿದ್ದು,ಕೆಂಗೇರಿಯ ಕೈಲಾಸ್ ಬಿಡಿಎ ಅಪಾರ್ಟ್ಮೆಂಟ್ನಲ್ಲಿ ಈ ಘಟನೆ ನಡೆದಿದೆ.
ದೂರುದಾರರು ಕಳೆದ ತಿಂಗಳು ಮನೆಯಲ್ಲಿ ಲಕ್ಷ್ಮೀ ಪೂಜೆ ಆಯೋಜಿಸಿ ಸಂಬಂಧಿಕರನ್ನು ಆಹ್ವಾನಿಸಿದ್ದರು. ಈ ವೇಳೆ ಅಶ್ವಥ್ ಕೂಡ ಮನೆಗೆ ಬಂದು ಒಡವೆಗಳನ್ನು ಗಮನಿಸಿದ್ದ.ಮರುದಿನ ಮನೆಯವರು ವಿವಿಧ ಕಾರಣಗಳಿಂದ ಹೊರಗೆ ತೆರಳಿದ್ದ ಸಂದರ್ಭದಲ್ಲಿ ಆರೋಪಿ ಮನೆಗೆ ಬಂದಿದ್ದಾನೆ.
ತನ್ನ ಮನೆಯ ಕೀ ಕಳೆದುಹೋಗಿದೆ ಎಂದು ಹೇಳಿ ನಕಲಿ ಕೀ ಮಾಡಿಸುವವರನ್ನು ಕರೆಸಿಕೊಂಡ ಆರೋಪಿ, ಅದೇ ಕೀ ಬಳಸಿ ಮನೆಯ ಬಾಗಿಲು ತೆರೆದಿದ್ದಾನೆ. ಬಳಿಕ ದೇವರ ಮೇಲಿದ್ದ ಹಾಗೂ ಕೋಣೆಯಲ್ಲಿದ್ದ ಅಸಲಿ ಚಿನ್ನಾಭರಣಗಳ ಬದಲಿಗೆ ಅವುಗಳನ್ನು ಹೋಲುವ ನಕಲಿ ಒಡವೆಗಳನ್ನು ಇಟ್ಟು, ಅಸಲಿ ಆಭರಣಗಳನ್ನು ಕದ್ದೊಯ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳ್ಳತನವಾಗಿದ್ದ ಆಭರಣಗಳಲ್ಲಿ ಎರಡು ಸರ ಹಾಗೂ ಒಂದು ಜೊತೆ ಬಳೆ ಸೇರಿವೆ. ದೂರುದಾರರ ಸಹೋದರ ಸಂಬಂಧಿಯೊಬ್ಬರು ಮನೆಯಲ್ಲಿ ಇಟ್ಟಿದ್ದ ಕಟ್ ಆಗಿದ್ದ ಸರವನ್ನೂ ಆರೋಪಿ ಕದ್ದಿದ್ದಾನೆ. ಜೊತೆಗೆ ಪೂಜೆಯ ತಟ್ಟೆಯಲ್ಲಿದ್ದ ಸುಮಾರು ೮ ಸಾವಿರ ನಗದನ್ನೂ ತೆಗೆದುಕೊಂಡು ಪರಾರಿಯಾಗಿದ್ದಾನೆ.
ಮನೆಯವರು ವಾಪಸ್ ಬಂದಾಗ ಆಭರಣಗಳು ಇದ್ದಂತೆಯೇ ಕಂಡಿದ್ದರಿಂದ ಮೊದಲಿಗೆ ಅನುಮಾನ ಬಂದಿರಲಿಲ್ಲ.ಬಳಿಕ ಆಭರಣಗಳನ್ನು ಪರಿಶೀಲಿಸಿದಾಗ ಅವು ನಕಲಿ ಎಂಬುದು ಗೊತ್ತಾಗಿದೆ.ನಂತರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಪೊಲೀಸರಿಗೆ ದೂರು ನೀಡಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಕೆಂಗೇರಿ ಠಾಣೆ ಪೊಲೀಸರು ತನಿಖೆ ನಡೆಸಿ ಅಶ್ವಥ್ ಕೆ. ಹೆಚ್.ನನ್ನು ಬಂಧಿಸಿದ್ದಾರೆ. ಆರೋಪಿಯಿಂದ ಕೆಲವು ಕಳವು ಮಾಡಲಾಗಿದ್ದ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
