
ಆರ್ ಎಸ್ ಎಸ್ -ಬಿಜೆಪಿಯವರನ್ನು ಬೆಂಗಳೂರು ಬಿಟ್ಟು ಓಡಿಸಿ- ಹರಿಪ್ರಸಾದ್
ಬೆಂಗಳೂರು .ಸೆ.29-ಜಿಬಿಎ (ಗ್ರೇಟರ್ ಬೆಂಗಳೂರು ಅಥಾರಿಟಿ) ಚುನಾವಣೆಗಳನ್ನು ಆದಷ್ಟು ಬೇಗ ನಡೆಸಬೇಕು ಎಂದು ಮಾಜಿ ಸಚಿವ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಸರವಣನ್ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಚುನಾವಣೆ ಈಗಾಗಲೇ ವಿಳಂಬವಾಗಿದೆ. ಪಕ್ಷದ ಕಾರ್ಯಕರ್ತರು ಹಾಗೂ ಎರಡನೇ ಹಂತದ ನಾಯಕತ್ವಕ್ಕೆ ಜಿಬಿಎ ಚುನಾವಣೆ ಮಹತ್ವದ್ದಾಗಿದೆ ಎಂದು ಅವರು ಹೇಳಿದರು. ತಮ್ಮ ಕ್ಷೇತ್ರದಲ್ಲಿ ಹತ್ತುಕ್ಕೂ ಹೆಚ್ಚು ವಾರ್ಡ್ಗಳು ಬರಲಿದ್ದು, ಅವುಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸಚಿವ ರಿಜ್ವಾನ್ ಅರ್ಷದ್ ಮಾತನಾಡಿ, ಸಾಮಾನ್ಯ ಕಾರ್ಯಕರ್ತನೂ ಪಕ್ಷದಲ್ಲಿ ಉನ್ನತ ಸ್ಥಾನಕ್ಕೆ ಏರಬಹುದು ಎಂಬುದಕ್ಕೆ ಸರವಣನ್ ಅವರ ನೇಮಕಾತಿ ಉದಾಹರಣೆ ಎಂದರು. ಇದೇ ವೇಳೆ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಅವರು ಟೀಕೆ ಮಾಡಿದ್ದು, ತಮ್ಮ ಹೋರಾಟ ಚುನಾವಣೆಯಲ್ಲಿ ಗೆಲ್ಲುವುದಕ್ಕಷ್ಟೇ ಅಲ್ಲ, ಪ್ರಜಾಪ್ರಭುತ್ವವನ್ನು ರಕ್ಷಿಸುವುದಕ್ಕಾಗಿ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಕಾಂಗ್ರೆಸ್ ಪಕ್ಷ ನಿರಂತರವಾಗಿ ಹೊಸ ನಾಯಕತ್ವಕ್ಕೆ ಅವಕಾಶ ನೀಡುವ ಪಕ್ಷವಾಗಿದೆ ಎಂದು ಹೇಳಿದರು. ಸರವಣನ್ ಅವರನ್ನು ಆಯ್ಕೆ ಮಾಡುವಲ್ಲಿ ರಾಹುಲ್ ಗಾಂಧಿ ಅಂತಿಮ ನಿರ್ಧಾರ ಕೈಗೊಂಡಿದ್ದಾರೆ ಎಂದು ಅವರು ತಿಳಿಸಿದರು.
ಮತದಾರರ ಪಟ್ಟಿಯ ವಿಚಾರವನ್ನೂ ಪ್ರಸ್ತಾಪಿಸಿದ ಹರಿಪ್ರಸಾದ್, ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು. ಬೆಂಗಳೂರಿನಲ್ಲಿ ಮತದಾರರ ಪಟ್ಟಿಯಿಂದ ದೊಡ್ಡ ಪ್ರಮಾಣದಲ್ಲಿ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂಬ ಆರೋಪವನ್ನೂ ಅವರು ಮಾಡಿದರು. ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧವೂ ಅವರು ತೀವ್ರ ಟೀಕೆಗಳನ್ನು ವ್ಯಕ್ತಪಡಿಸಿದರು.
ಬಳಿಕ ಬಿಜೆಪಿ ಶಾಸಕರು ಹಾಗೂ ಆರ್‌ಎಸ್‌ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಬಿಜೆಪಿ ಶಾಸಕರು ಬೋಗಸ್ ಎಂದು ಟೀಕಿಸಿದ್ದಾರೆ.
ವಂದೇ ಮಾತರಂ ಗೀತೆಯನ್ನು ಉಲ್ಲೇಖಿಸಿದ ಅವರು, ಬಿಜೆಪಿ ನಾಯಕರಿಗೆ ಗೀತೆಯನ್ನು ಸರಿಯಾಗಿ ಹಾಡಲು ಬರುವುದಿಲ್ಲ ಎಂದು ಆರೋಪಿಸಿದರು. ಕಾಂಗ್ರೆಸ್‌ನವರು ವಂದೇ ಮಾತರಂ ಗೀತೆಯನ್ನು ಚೆನ್ನಾಗಿ ಹಾಡುತ್ತಾರೆ. ಆರ್‌ಎಸ್‌ಎಸ್ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಬೆಂಗಳೂರಿನಿAದ ಓಡಿಸಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ಕಾರ್ಯಕ್ರಮದ ವೇಳೆ ಜಿಬಿಎ ಚುನಾವಣೆ ಶೀಘ್ರ ನಡೆಸಬೇಕು, ಮತದಾರರ ಪಟ್ಟಿಯಲ್ಲಿನ ಹೆಸರುಗಳ ಕುರಿತು ಎಚ್ಚರಿಕೆ ವಹಿಸಬೇಕು ಎಂಬುದು ಕಾಂಗ್ರೆಸ್ ನಾಯಕರ ಪ್ರಮುಖ ಒತ್ತಾಯವಾಗಿತ್ತು.ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಮನ್ಸೂರ್ ಅಲಿ ಖಾನ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
