LatestTop Storiesಜಿಲ್ಲಾ ಸುದ್ದಿಗಳು | District Newsಬೆಂಗಳೂರು-Bengaluruರಾಜಕೀಯ | Politics

ಕಳಪೆ ಶೂ-ಸಾಕ್ಸ್ಗಳ ಆರೋಪ ಸುಳ್ಳು -ಮಧು ಬಂಗಾರಪ್ಪ

ಬೆಂಗಳೂರು.ಸೆ26- ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸಲಾಗುತ್ತಿರುವ ಶೂ-ಸಾಕ್ಸ್ಗಳು ಕಳಪೆ ಗುಣಮಟ್ಟದ್ದಾಗಿವೆ ಎಂಬ ಆರೋಪವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಳ್ಳಿಹಾಕಿದ್ದು, ಕೆಲವೆಡೆ ಕಂಡುಬಂದಿರುವ ಸಮಸ್ಯೆ ಗುಣಮಟ್ಟಕ್ಕೆ ಸಂಬಂಧಿಸಿದ್ದಲ್ಲ, ಶೂಗಳ ಗಾತ್ರಕ್ಕೆ ಸಂಬಂಧಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೂಗಳ ಗುಣಮಟ್ಟ ಕಳಪೆಯಾಗಿದೆ ಎಂದು ಆರೋಪಿಸಿ ಪ್ರಸಾರವಾಗಿದ್ದ ಫೋಟೋಗಳನ್ನು ಪರಿಶೀಲಿಸಲಾಗಿದ್ದು, ಅವು ಕಳೆದ ವರ್ಷದ ಶೂಗಳ ಫೋಟೋಗಳಾಗಿವೆ ಎಂದು ಸಚಿವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ (ಸಿಇಒ) ಸ್ಥಳಕ್ಕೆ ತೆರಳಿ ಶೂಗಳ ಗುಣಮಟ್ಟ ಪರಿಶೀಲಿಸುವಂತೆ ಸೂಚಿಸಲಾಗಿದೆ ಎಂದರು.

ಈ ಬಾರಿ ರಾಜ್ಯ ಮಟ್ಟದಲ್ಲಿ ಮೊದಲ ಬಾರಿಗೆ ಮಕ್ಕಳಿಗೆ ಶೂಗಳನ್ನು ವಿತರಿಸಲಾಗುತ್ತಿದ್ದು, ಉತ್ಪಾದನೆ ಮತ್ತು ಸಾಗಣೆಯಲ್ಲಿ ವಿಳಂಬವಾಗಿದೆ. ಸುಮಾರು ೧೨ ಲಕ್ಷ ಶೂಗಳ ಸಾಗಣೆಗೆ ಸಂಬಂ ಧಿಸಿದAತೆ ವಿಳಂಬವಾಗಿದ್ದು, ಉತ್ಪಾದನಾ ಹಂತದಲ್ಲೂ ಸುಮಾರು ಎರಡೂವರೆ ಲಕ್ಷ ಶೂಗಳು ಇದ್ದವು. ಜುಲೈನಲ್ಲಿ ತಾವು ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ವಿತರಣಾ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದ್ದು, ಬಹುತೇಕ ಕಡೆ ವಿತರಣೆ ಪೂರ್ಣಗೊಂಡಿದೆ ಎಂದು ಹೇಳಿದರು.

ಕೆಲವು ಪ್ರದೇಶಗಳಲ್ಲಿ ಮಕ್ಕಳಿಗೆ ನೀಡಲಾದ ಶೂಗಳು ಬಿಗಿಯಾಗಿವೆ ಎಂಬ ದೂರುಗಳು ಬಂದಿವೆ. ಮಕ್ಕಳ ಕಾಲಿನ ಗಾತ್ರಕ್ಕೆ ಅನುಗುಣವಾಗಿ ಸರಿಯಾದ ಗಾತ್ರ ದೊರೆಯದಿರುವುದರಿಂದ ಈ ಸಮಸ್ಯೆ ಉಂಟಾಗಿದೆ. ಇಂತಹ ಪ್ರಕರಣಗಳಲ್ಲಿ ಶೂಗಳನ್ನು ತಕ್ಷಣ ಬದಲಾಯಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಶೂಗಳ ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ.ಸಮಸ್ಯೆ ಗುಣಮಟ್ಟದಲ್ಲಲ್ಲ,ಗಾತ್ರದಲ್ಲಿದೆ. ಗುಣಮಟ್ಟದಲ್ಲಿ ದೋಷ ಕಂಡುಬಂದರೆ, ಟೆಂಡರ್ ಮೂಲಕ ಶೂ ಪೂರೈಸಿದ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸಂಪೂರ್ಣ ಅಧಿಕಾರವಿದೆ ಎಂದು ಹೇಳಿದರು.

ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಟೀಕೆ ಮಾಡುವುದು ಸಹಜ. ಆದರೆ ಮಕ್ಕಳಿಗಾಗಿ ಖರ್ಚು ಮಾಡುತ್ತಿರುವ ತೆರಿಗೆದಾರರ ಹಣವನ್ನು ನಿಯಮಾನುಸಾರವೇ ಬಳಸಲಾಗುತ್ತಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

Share with Friends
author avatar
Digital Desk