
ವಾಣಿಜ್ಯನಗರಿಯಲ್ಲಿ ಗಣೇಶೋತ್ಸವಕ್ಕೆ ಕ್ಷಣಗಣನೆ..!ಹುಬ್ಬಳ್ಳಿ ನಗರದಲ್ಲಿ ಪೊಲೀಸ್ ಇಲಾಖೆ ಕಟ್ಟೆಚ್ಚರ..
ಹುಬ್ಬಳ್ಳಿ : ಶ್ರೀ ಗಣೇಶೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಹುಬ್ಬಳ್ಳಿ ನಗರದಲ್ಲಿ ಪೊಲೀಸ್ ಇಲಾಖೆ ಕಟ್ಟೆಚ್ಚರದ ಭದ್ರತಾ ಕ್ರಮ ಕೈಗೊಂಡಿದೆ. ಈ ಹಿಂದೆ ಗಲಾಟೆ ನಡೆದ ಪ್ರದೇಶಗಳಲ್ಲಿ ಪೊಲೀಸರು ರೂಟ್ ಮಾರ್ಚ್ ನಡೆಸಿ, ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.
ವಿಶೇಷ ಭದ್ರತಾ ದಳದ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ನಗರದ ಪ್ರಮುಖ ಪ್ರದೇಶಗಳಲ್ಲಿ ನಿರಂತರ ಗಸ್ತು ನಡೆಸುತ್ತಿದ್ದಾರೆ. ಮರಾಠ ಗಲ್ಲಿ, ಗಣೇಶ ಪೇಟೆ, ಬಾಕಳೆ ಗಲ್ಲಿ, ದುರ್ಗದಬೈಲ್, ದಾಜಿಬಾನ್ ಪೇಟೆ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.ಗಣೇಶ ಮೆರವಣಿಗೆಗಳ ಮೇಲೆ 30ಕ್ಕೂ ಅಧಿಕ ಡ್ರೋನ್‌ಗಳು, ಸಿಸಿಟಿವಿ, ವಾಚ್‌ಟವರ್‌ಗಳು ಹಾಗೂ ಬಾಡಿ ವೋರ್ನ್ ಕ್ಯಾಮೆರಾಗಳ ಮೂಲಕ ನಿಗಾ
ಗಣೇಶೋತ್ಸವವನ್ನು ಶಾಂತಿಯುತವಾಗಿ ಹಾಗೂ ಸುರಕ್ಷಿತವಾಗಿ ಆಚರಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಗಣೇಶ ಮೆರವಣಿಗೆಗಳ ಮೇಲೆ 30ಕ್ಕೂ ಅಧಿಕ ಡ್ರೋನ್‌ಗಳು, ಸಿಸಿಟಿವಿ, ವಾಚ್‌ಟವರ್‌ಗಳು ಹಾಗೂ ಬಾಡಿ ವೋರ್ನ್ ಕ್ಯಾಮೆರಾಗಳ ಮೂಲಕ ನಿಗಾ ವಹಿಸಲಾಗುವುದು ಎಂದು ಪೊಲೀಸ್ ಆಯುಕ್ತ ಭೂಷಣ್ ಬೊರಸೆ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣೇಶೋತ್ಸವ ಬಂದೋಬಸ್ತ್‌ಗೆ 400 ಪೊಲೀಸ್ ಅಧಿಕಾರಿಗಳು, 2,100 ಸಿವಿಲ್ ಪೊಲೀಸ್ ಸಿಬ್ಬಂದಿ, 600 ಆರ್ಮ್ಡ್ ಪೊಲೀಸ್ ಸಿಬ್ಬಂದಿ ಹಾಗೂ 500 ಹೋಮ್‌ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ಸಿಆರ್‌ಪಿ, ಕೆಎಸ್‌ಆರ್‌ಪಿ ಹಾಗೂ ರ‍್ಯಾಪಿಡ್ ಆ್ಯಕ್ಷನ್ ಫೋರ್ಸ್‌ನ ಒಂದು ಕಂಪನಿ ಬಂದೋಬಸ್ತ್‌ಗೆ ಬಳಸಿಕೊಳ್ಳಲಾಗುತ್ತಿದೆ ಎಂದರು.
ಸೂಕ್ಷ್ಮ ಪ್ರದೇಶಗಳಲ್ಲಿ ಅಳವಡಿಸಿರುವ ಸಿಸಿಟಿವಿಗಳ ನೇರ ಮೇಲ್ವಿಚಾರಣೆ ಮೂರು ಪಾಳಿಗಳಲ್ಲಿ ನಡೆಯಲಿದೆ. ಮೆರವಣಿಗೆ ಸಾಗುವ ಮಾರ್ಗಗಳ ಮೇಲೆ ಡ್ರೋನ್‌ಗಳಿಂದ ಕಣ್ಗಾವಲು ಇರಲಿದೆ. ಪ್ರಮುಖ ಸ್ಥಳಗಳಲ್ಲಿ 15 ವಾಚ್‌ಟವರ್‌ಗಳನ್ನು ನಿರ್ಮಿಸಲು ಮಹಾನಗರ ಪಾಲಿಕೆಗೆ ಮನವಿ ಮಾಡಲಾಗಿದೆ. ಕಟ್ಟಡಗಳ ಮೇಲ್ಭಾಗದಲ್ಲಿಯೂ ಸಿಬ್ಬಂದಿಯನ್ನು ‘ಸ್ಕೈ ಸೆಂಟ್ರಿ’ಯಾಗಿ ನಿಯೋಜಿಸಿ, ಟ್ರಾಫಿಕ್ ಹಾಗೂ ಗಲಾಟೆಗಳ ಮೇಲೆ ನಿಗಾ ವಹಿಸಲಾಗುವುದು ಎಂದರು.
ಶಬ್ದಮಾಲಿನ್ಯಕ್ಕೆ ಕಡಿವಾಣ
ಗಣೇಶ ಮಂಡಳಿಗಳು ಶಬ್ದಮಾಲಿನ್ಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪ್ರತಿ ಮೆರವಣಿಗೆಯೊಂದಿಗೆ ಸಿಬ್ಬಂದಿಯನ್ನು ನಿಯೋಜಿಸಿ, ಮೊಬೈಲ್ ಸೌಂಡ್ ಮೀಟರ್ ಮೂಲಕ ಶಬ್ದದ ಪ್ರಮಾಣ ಪರಿಶೀಲಿಸಲಾಗುವುದು. ನಿಯಮ ಉಲ್ಲಂಘಿಸುವ ಧ್ವನಿವರ್ಧಕ ಹಾಗೂ ಹೆಚ್ಚುವರಿ ಶಬ್ದ ಉಂಟುಮಾಡುವ ಸಾಧನಗಳನ್ನು ಜಪ್ತಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಪ್ರೆಗ್ನೆಂಟ್ ಮಹಿಳೆಯರು, ವೃದ್ಧರು, ರೋಗಿಗಳು ಹಾಗೂ ನವಜಾತ ಶಿಶುಗಳಿಗೂ ತೊಂದರೆಯಾಗದಂತೆ ಮಂಡಳಿಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಲೇಸರ್ ಲೈಟ್ ಹಾಗೂ ತೀವ್ರ ಶಬ್ದ ಉಂಟುಮಾಡುವ ಹೆಚ್ಚುವರಿ ಯಂತ್ರೋಪಕರಣಗಳಿಗೆ ಅವಕಾಶವಿಲ್ಲ ಎಂದರು.
ಪೆಂಡಾಲ್‌ಗಳಿಗೆ ಸುರಕ್ಷತಾ ಸೂಚನೆ ಪ್ರತಿ ಗಣೇಶ ಪೆಂಡಾಲ್‌ನಲ್ಲಿ ಅಗ್ನಿಶಾಮಕ ಸಾಧನ, ನೀರು ಹಾಗೂ ಮರಳಿನ ಬಕೆಟ್‌ಗಳನ್ನು ಕಡ್ಡಾಯವಾಗಿ ಇರಿಸಿಕೊಳ್ಳಬೇಕು.
ಸಾಧ್ಯವಾದರೆ ಸಿಸಿಟಿವಿ ಅಳವಡಿಸಬೇಕು. ರಾತ್ರಿ ಕನಿಷ್ಠ ಒಬ್ಬರು ಅಥವಾ ಇಬ್ಬರು ಮಂಡಳಿಯ ಪದಾಧಿಕಾರಿಗಳು ಪೆಂಡಾಲ್‌ನಲ್ಲೇ ಇರುವಂತೆ ಸೂಚಿಸಲಾಗಿದೆ. ಆಂಬುಲೆನ್ಸ್, ಪೊಲೀಸ್ ಹಾಗೂ ಅಗ್ನಿಶಾಮಕ ವಾಹನಗಳಿಗೆ ಯಾವುದೇ ಸಂದರ್ಭದಲ್ಲಿ ದಾರಿ ಲಭ್ಯವಾಗುವಂತೆ ಪೆಂಡಾಲ್ ನಿರ್ಮಿಸಬೇಕು ಎಂದು ಸಲಹೆ ನೀಡಲಾಗಿದೆ.
ಎರಡು ಮೆರವಣಿಗೆ ಒಟ್ಟಿಗೆ ಬಿಡುವುದಿಲ್ಲ
ಮೆರವಣಿಗೆಗಳ ವೇಳೆ ಎರಡು ಮೆರವಣಿಗೆಗಳು ಒಂದೇ ಜಂಕ್ಷನ್‌ನಲ್ಲಿ ಸೇರುವುದನ್ನು ತಪ್ಪಿಸಲು ಹೊಸ ವ್ಯವಸ್ಥೆ ರೂಪಿಸಲಾಗಿದೆ. ಒಂದು ಮೆರವಣಿಗೆ ತೆರಳಿದ ಬಳಿಕವೇ ಮತ್ತೊಂದು ಮೆರವಣಿಗೆಗೆ ಅವಕಾಶ ನೀಡಲಾಗುವುದು. ಅಗತ್ಯವಿದ್ದಲ್ಲಿ ಮೆರವಣಿಗೆಗಳನ್ನು ಕೆಲಕಾಲ ತಡೆದು ಸಂಚಾರ ಹಾಗೂ ಜನದಟ್ಟಣೆ ನಿಯಂತ್ರಿಸಲಾಗುವುದು ಎಂದರು.
ಇತ್ತೀಚೆಗೆ ಎರಡು ಮೆರವಣಿಗೆಗಳು ಒಂದೇ ಜಂಕ್ಷನ್‌ನಲ್ಲಿ ಸೇರಿದಾಗ ಜನದಟ್ಟಣೆ ಹೆಚ್ಚಾಗಿ ಕೆಲವರು ಗಲಾಟೆ ನಡೆಸಿದ್ದರು. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಕನಿಷ್ಠ ಬಲಪ್ರಯೋಗ ಮಾಡಿದ್ದು, ಸುಮಾರು 30 ಸೆಕೆಂಡ್‌ಗಳಲ್ಲಿ ಗುಂಪನ್ನು ಚದುರಿಸಲಾಗಿತ್ತು. ಅದನ್ನು ಲಾಠಿಚಾರ್ಜ್ ಎನ್ನಲಾಗದು ಎಂದು ಸ್ಪಷ್ಟಪಡಿಸಿದರು.
ಆ್ಯಂಟಿ ಸ್ಟ್ಯಾಬಿಂಗ್ ಸ್ಕ್ವಾಡ್
ಪ್ರಮುಖ ಜಂಕ್ಷನ್‌ಗಳಲ್ಲಿ ಆ್ಯಂಟಿ ಸ್ಟ್ಯಾಬಿಂಗ್ ಸ್ಕ್ವಾಡ್‌ಗಳನ್ನು ನಿಯೋಜಿಸಲಾಗಿದೆ. ಪಿಎಸ್‌ಐ ನೇತೃತ್ವದ ಈ ತಂಡದಲ್ಲಿ ಕ್ರೈಂ ಹಾಗೂ ಸ್ಥಳೀಯ ಸಿಬ್ಬಂದಿ ಇರಲಿದ್ದು, ಹ್ಯಾಂಡ್‌ಹೆಲ್ಡ್ ಮೆಟಲ್ ಡಿಟೆಕ್ಟರ್‌ಗಳ ಮೂಲಕ ತಪಾಸಣೆ ನಡೆಸಲಿದೆ. ಮದ್ಯ ಹಾಗೂ ಮಾದಕ ವಸ್ತುಗಳ ಸೇವನೆ ತಡೆಗೂ ವಿಶೇಷ ತಪಾಸಣೆ ನಡೆಯಲಿದೆ.
ಕಳೆದ 10 ದಿನಗಳಲ್ಲಿ ನಾಲ್ಕು ಆರ್ಮ್ಸ್ ಆಕ್ಟ್, 17 ಅಬಕಾರಿ ಕಾಯ್ದೆ ಹಾಗೂ ಆರು ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಮೆಟಲ್ ಡಿಟೆಕ್ಟರ್, ಆಲ್ಕೋಮೀಟರ್ ಹಾಗೂ ನಾರ್ಕೋಟಿಕ್ಸ್ ಕಿಟ್‌ಗಳೊಂದಿಗೆ ಪ್ರತಿದಿನ ತಪಾಸಣೆ ನಡೆಸಲಾಗುತ್ತಿದೆ ಎಂದರು.
ಪೆಂಡಾಲ್, ಪಾರ್ಕಿಂಗ್ ಮಾಹಿತಿ ವೆಬ್‌ಸೈಟ್‌ನಲ್ಲಿ
ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಗಣೇಶೋತ್ಸವ ವೀಕ್ಷಣೆಗೆ ಬರುವವರಿಗೆ ಅನುಕೂಲವಾಗುವಂತೆ ವಿಶೇಷ ವೆಬ್‌ಸೈಟ್ ಆರಂಭಿಸಲಾಗಿದೆ. ಇದರಲ್ಲಿ ನಗರದ ಗಣೇಶ ಪೆಂಡಾಲ್‌ಗಳ ಸ್ಥಳ, ಸಮೀಪದ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಲೊಕೇಶನ್ ಮಾಹಿತಿ ಲಭ್ಯವಾಗಲಿದೆ.ಮೆರವಣಿಗೆ ಮಾರ್ಗಗಳಲ್ಲಿ ಹಲವು ವರ್ಷಗಳಿಂದ ನಿಂತಿರುವ ನಿರುಪಯುಕ್ತ ವಾಹನಗಳನ್ನು ತೆರವುಗೊಳಿಸುವ ಕಾರ್ಯವನ್ನು ಸಂಚಾರ ಪೊಲೀಸರು ಆರಂಭಿಸಿದ್ದಾರೆ. ಇಂತಹ ವಾಹನಗಳು ಕಂಡುಬಂದರೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.
ಸೈಬರ್ ವಂಚನೆ ತಡೆಗೆ ಅರಿವು ಮುಖ್ಯ
ಗಣೇಶೋತ್ಸವದ ಬಳಿಕ ಸೈಬರ್ ಅಪರಾಧ ಹಾಗೂ ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸುವುದೇ ಪ್ರಮುಖ ತಡೆಗಟ್ಟುವ ಕ್ರಮವಾಗಿದೆ. ನಿವೃತ್ತರು ಹಾಗೂ ಹಿರಿಯ ನಾಗರಿಕರು ‘ಡಿಜಿಟಲ್ ಅರೆಸ್ಟ್’ ಹೆಸರಿನ ವಂಚನೆಗೆ, ಯುವಕರು ವಿವಿಧ ಆನ್‌ಲೈನ್ ವಂಚನೆಗಳಿಗೆ ಗುರಿಯಾಗುತ್ತಿದ್ದಾರೆ ಎಂದರು.
ಸೈಬರ್ ಜಾಗೃತಿ ಅಭಿಯಾನವನ್ನು ಖಾಸಗಿ ತಜ್ಞರು, ಸ್ಟಾರ್ಟ್‌ಅಪ್‌ಗಳು ಹಾಗೂ ಸಾಮಾಜಿಕ ಜಾಲತಾಣದ ಪ್ರಭಾವಿಗಳ ಸಹಯೋಗದಲ್ಲಿ ಕೈಗೊಳ್ಳಲಾಗುವುದು. ಹುಬ್ಬಳ್ಳಿ-ಧಾರವಾಡದಲ್ಲಿ ಸೈಬರ್ ಅಪರಾಧ ತನಿಖೆಗೆ ವಿಶೇಷ ಪ್ರಯೋಗಾಲಯ, ಆಧುನಿಕ ಉಪಕರಣಗಳು ಹಾಗೂ ಹೆಚ್ಚಿನ ತಜ್ಞ ಸಿಬ್ಬಂದಿ ಅಗತ್ಯವಿದೆ. ಈ ಕುರಿತು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಎನ್‌ಎಫ್‌ಎಸ್‌ಯು, ಐಐಟಿ ಧಾರವಾಡ ಸೇರಿದಂತೆ ನಗರದ ಶಿಕ್ಷಣ ಸಂಸ್ಥೆಗಳ ತಜ್ಞರ ಸಹಕಾರ ಪಡೆಯಲಾಗುವುದು ಎಂದು ಭೂಷಣ್ ಬೊರಸೆ ಹೇಳಿದರು.
