Crime Newsಮೈಸೂರು-Mysuru

ನಟ ದರ್ಶನ್‌ಗೆ ಮತ್ತೊಂದು ಕಾನೂನು ಸಂಕಷ್ಟ: ಫಾರ್ಮ್‌ಹೌಸ್ ಪಕ್ಷಿ ಪ್ರಕರಣದಲ್ಲಿ ಕೋರ್ಟ್ ಸಮನ್ಸ್

ಪಕ್ಷಿ ಸಾಕಿದ ಆರೋಪ ದರ್ಶನ್ವಿಜಯಲಕ್ಷ್ಮಿ ಹೈಕೋರ್ಟ್ ಮೊರೆ

ಮೈಸೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಕಾನೂನು ಹೋರಾಟದ ನಡುವೆಯೇ ನಟ ದರ್ಶನ್ ತೂಗುದೀಪ ಅವರಿಗೆ ಮತ್ತೊಂದು ಪ್ರಕರಣ ಎದುರಾಗಿದೆ. ಮೈಸೂರಿನ ಟಿ. ನರಸೀಪುರ ರಸ್ತೆಯಲ್ಲಿರುವ ಅವರ ಫಾರ್ಮ್‌ಹೌಸ್‌ನಲ್ಲಿ ಸಂರಕ್ಷಿತ ವಲಸೆ ಪಕ್ಷಿಗಳನ್ನು ಅಕ್ರಮವಾಗಿ ಸಾಕಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಟಿ. ನರಸೀಪುರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

ಫಾರ್ಮ್‌ಹೌಸ್‌ನಲ್ಲಿ ಪಟ್ಟೆ ತಲೆ ಹೆಬ್ಬಾತು (Bar-headed Geese) ಪಕ್ಷಿಗಳನ್ನು ಪಂಜರದಲ್ಲಿಟ್ಟಿರುವ ವಿಡಿಯೋವೊಂದು ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿ, ಪಕ್ಷಿಗಳನ್ನು ವಶಕ್ಕೆ ಪಡೆದಿದ್ದರು. ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಸೆಕ್ಷನ್ 9, 39 ಮತ್ತು 51ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ನಟ ದರ್ಶನ್, ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಫಾರ್ಮ್‌ಹೌಸ್ ಮ್ಯಾನೇಜರ್ ನಾಗರಾಜ್ ಅವರಿಗೆ ನ್ಯಾಯಾಲಯದಿಂದ ಸಮನ್ಸ್ ನೀಡಲಾಗಿದೆ.

ಇದೀಗ ಸಮನ್ಸ್ ಹಾಗೂ ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆಗಳನ್ನು ರದ್ದುಗೊಳಿಸುವಂತೆ ಕೋರಿ ದರ್ಶನ್ ಮತ್ತು ವಿಜಯಲಕ್ಷ್ಮಿ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ತಮ್ಮ ಫಾರ್ಮ್‌ಹೌಸ್‌ನಲ್ಲಿ ಹಲವು ಸಾಕು ಪ್ರಾಣಿಗಳು ಮತ್ತು ಪಕ್ಷಿಗಳನ್ನು ಸಾಕಲಾಗುತ್ತಿದೆ. ಆದರೆ ಪ್ರಕರಣಕ್ಕೆ ಸಂಬಂಧಿಸಿದ ನಾಲ್ಕು ಹೆಬ್ಬಾತುಗಳು ತಾವಾಗಿಯೇ ಹಾರಿ ಬಂದು ಫಾರ್ಮ್‌ಹೌಸ್ ಆವರಣ ಪ್ರವೇಶಿಸಿದ್ದವು ಎಂದು ದಂಪತಿ ಅರ್ಜಿಯಲ್ಲಿ ತಿಳಿಸಿದ್ದಾರೆ.

ಅವು ಸಂರಕ್ಷಿತ ವನ್ಯಜೀವಿಗಳೆಂಬ ಮಾಹಿತಿ ಅರಣ್ಯ ಇಲಾಖೆ ಪರಿಶೀಲನೆಯ ಬಳಿಕವಷ್ಟೇ ತಿಳಿದುಬಂದಿದ್ದು, ಉದ್ದೇಶಪೂರ್ವಕವಾಗಿ ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ. ಹೀಗಾಗಿ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣ ಹಾಗೂ ನ್ಯಾಯಾಲಯದ ಪ್ರಕ್ರಿಯೆಗಳನ್ನು ರದ್ದುಗೊಳಿಸಬೇಕು ಎಂದು ದಂಪತಿ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

Share with Friends
author avatar
Digital Desk