LatestTop Storiesಜಿಲ್ಲಾ ಸುದ್ದಿಗಳು | District Newsಬೆಳಗಾವಿ-Belagavi

ಸತೀಶ್ ಜಾರಕಿಹೊಳಿ ಆಪ್ತರ ಮನೆಗಳ ಮೇಲೂ ED ದಾಳಿ – ಜಿಲ್ಲೆಯಾದ್ಯಂತ ಸಂಚಲನ

ಬೆಳಗಾವಿ:ಬೆಳಗಾವಿ ಜಿಲ್ಲೆಯಾದ್ಯಂತ ಇಂದು ಬೆಳಂಬೆಳಗ್ಗೆ ಜಾರಿ ನಿರ್ದೇಶನಾಲಯ ಅಂದರೆ ED ಅಧಿಕಾರಿಗಳ ದಾಳಿ ಸಂಚಲನ ಸೃಷ್ಟಿಸಿದೆ.

ಲೋಕೋಪಯೋಗಿ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಬೆಂಗಳೂರು, ಬೆಳಗಾವಿ ಸೇರಿದಂತೆ ಹಲವು ಸ್ಥಳಗಳಲ್ಲಿ ED ಅಧಿಕಾರಿಗಳು ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಬೆಂಗಳೂರು ಡಾಲರ್ಸ್ ಕಾಲೋನಿಯಲ್ಲಿರುವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲೂ ED ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಸದಾಶಿವನಗರದ ಸರ್ಕಾರಿ ನಿವಾಸದಲ್ಲೂ ಪರಿಶೀಲನೆ ಮುಂದುವರೆದಿದೆ.

ಇದೇ ವೇಳೆ, ಸತೀಶ್ ಜಾರಕಿಹೊಳಿ ಅವರ ಆಪ್ತರೆಂದು ಹೇಳಲಾಗುತ್ತಿರುವ ರಾಜು ಧರಗಶೆಟ್ಟಿ, ವಿಠ್ಠಲ ಪ್ರಸನ್ನವರ ಹಾಗೂ ಡಾ. ಗಿರೀಶ್ ಸೋನಾವಾಳ್ಕರ್ ಸೇರಿದಂತೆ ಹಲವು ಮಂದಿಗೆ ಸಂಬಂಧಿಸಿದ ಸ್ಥಳಗಳಲ್ಲೂ ED ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬೆಂಗಳೂರು, ಬೆಳಗಾವಿ, ಗೋಕಾಕ್, ಮಹಾರಾಷ್ಟ್ರ ಸೇರಿದಂತೆ ಒಟ್ಟು 15 ಕ್ಕೂ ಅಧಿಕ ಕಡೆಗಳಲ್ಲಿ CRPF ಭದ್ರತೆಯೊಂದಿಗೆ 25ಕ್ಕೂ ಹೆಚ್ಚು ED ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಈ ದಾಳಿಯು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA)-1999 ಅಡಿಯಲ್ಲಿ ನಡೆಯುತ್ತಿದ್ದು, ದಕ್ಷಿಣ ಆಫ್ರಿಕಾ, ಉಗಾಂಡ ಸೇರಿದಂತೆ ವಿದೇಶಗಳಲ್ಲಿ ಅಕ್ರಮ ಹೂಡಿಕೆ ಮತ್ತು ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಶೋಧ ನಡೆಯುತ್ತಿದೆ ಎಂದು ಇಡಿ ಮೂಲಗಳು ತಿಳಿಸಿವೆ.

ಈ ಹಿಂದೆ ಸಚಿವರ ಸಂಬಂಧಿ ಹಾಗೂ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ಮಂಜುನಾಥ್ ಅವರಿಗೆ ಸಂಬಂಧಿಸಿದ ಪ್ರಕರಣಕ್ಕೂ ಈ ದಾಳಿಗೂ ಸಂಬಂಧವಿಲ್ಲ ಎಂದು ಇಡಿ ಸ್ಪಷ್ಟಪಡಿಸಿದೆ.

Share with Friends
author avatar
Digital Desk