
ದೊಡ್ಡಬಳ್ಳಾಪುರದಲ್ಲಿ ಭೀಕರ ರೈಲು ದುರಂತ: ಇಬ್ಬರು ಮಹಿಳೆಯರು, ಮಗು ಸಾವು
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಹೊರವಲಯದ ಮುತ್ತೂರು ರೈಲ್ವೆ ಹಳಿ ಬಳಿ ಭೀಕರ ರೈಲು ದುರಂತ ಸಂಭವಿಸಿದ್ದು, ವೇಗವಾಗಿ ಬಂದ ಎಕ್ಸ್‌ಪ್ರೆಸ್ ರೈಲು ಹರಿದ ಪರಿಣಾಮ ಇಬ್ಬರು ಮಹಿಳೆಯರು ಹಾಗೂ ಒಂದು ಮಗು ಮೃತಪಟ್ಟಿರುವ ಘಟನೆ ನಡೆದಿದೆ.
ಮುತ್ತೂರು ಕಡೆಯಿಂದ ದೊಡ್ಡಬಳ್ಳಾಪುರ ರೈಲ್ವೆ ನಿಲ್ದಾಣದತ್ತ ನಡೆದುಕೊಂಡು ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ರೈಲ್ವೆ ಹಳಿಯ ತಿರುವಿನ ಬಳಿ ರೈಲು ಬರುತ್ತಿರುವುದು ಗಮನಕ್ಕೆ ಬಾರದ ಹಿನ್ನೆಲೆಯಲ್ಲಿ ಅಪಘಾತ ಸಂಭವಿಸಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ.
ಘಟನೆಯಲ್ಲಿ ಇಬ್ಬರು ಮಹಿಳೆಯರು ಹಾಗೂ ಒಂದು ಮಗು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರ ಗುರುತು ಹಾಗೂ ಇತರೆ ವಿವರಗಳು ಇನ್ನಷ್ಟೇ ಖಚಿತವಾಗಬೇಕಿದೆ.
ಮೃತರ ಗುರುತು ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ. ಸ್ಥಳದಲ್ಲಿ ದೊರೆತ ವಸ್ತ್ರಗಳ ಆಧಾರದ ಮೇಲೆ ಅವರು ಮುಸ್ಲಿಂ ಸಮುದಾಯಕ್ಕೆ ಸೇರಿದವರಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಈ ಕುರಿತು ಪೊಲೀಸರು ಅಧಿಕೃತ ದೃಢೀಕರಣ ನೀಡಬೇಕಿದೆ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಗುರುತು ಪತ್ತೆಹಚ್ಚುವ ಜೊತೆಗೆ ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.
ಮೃತರ ಗುರುತು ಮತ್ತು ಅಪಘಾತದ ನಿಖರ ಕಾರಣದ ಬಗ್ಗೆ ರೈಲ್ವೆ ಪೊಲೀಸರ ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
