ಜಿಲ್ಲಾ ಸುದ್ದಿಗಳು | District News

ನ್ಯಾಯಾಲಯದ ಆವರಣದಲ್ಲೇ ಮಾವನಿಂದ ಅಳಿಯನಿಗೆ ಚಾಕು ಇರಿತ

ರಾಯಚೂರು: ಕುಟುಂಬ ಕಲಹದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆವರಣದಲ್ಲೇ ಮಾವನೊಬ್ಬ ಅಳಿಯನಿಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ನಡೆದಿದೆ.

ಸಿಂಧನೂರು ನಗರದ ನ್ಯಾಯಾಲಯದ ಆವರಣದಲ್ಲಿ ಈ ಘಟನೆ ನಡೆದಿದ್ದು, ಶಂಬುಲಿಂಗ (50) ಚಾಕು ಇರಿತಕ್ಕೆ ಒಳಗಾದ ವ್ಯಕ್ತಿಯಾಗಿದ್ದಾರೆ. ಅವರ ಮಾವ ದಾನಪ್ಪ ಎಂಬಾತ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಶಂಬುಲಿಂಗ ಹಾಗೂ ಅವರ ಪತ್ನಿಯ ನಡುವೆ ಹಲವು ವರ್ಷಗಳಿಂದ ಕೌಟುಂಬಿಕ ಕಲಹವಿತ್ತು ಎನ್ನಲಾಗಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾವ-ಅಳಿಯನ ನಡುವೆ ಜಗಳ ನಡೆದಿದೆ. ಈ ವೇಳೆ ದಾನಪ್ಪ ಚಾಕುವಿನಿಂದ ಶಂಬುಲಿಂಗನಿಗೆ ಇರಿದಿದ್ದಾನೆ ಎಂದು ತಿಳಿದುಬಂದಿದೆ.

ಗಾಯಗೊಂಡ ಶಂಬುಲಿಂಗ ಅವರನ್ನು ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನಾ ಸ್ಥಳಕ್ಕೆ ಸಿಂಧನೂರು ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.

Share with Friends
author avatar
Digital Desk