LatestTop Storiesರಾಜ್ಯ-Karnatakaರಾಷ್ಟ್ರೀಯ-National

ತಮಿಳುನಾಡಿಗೆ 15 ದಿನ 9 ಸಾವಿರ ಕ್ಯೂಸೆಕ್ ನೀರು ಬಿಡಿ

ನವದೆಹಲಿ.ಆ.25- ಕರ್ನಾಟಕಕ್ಕೆ ಮತ್ತೆ ಕಾವೇರಿ ಆಘಾತ ಎದುರಾಗಿದೆ. ತಮಿಳುನಾಡಿಗೆ ಮುಂದಿನ 15 ದಿನಗಳವರೆಗೆ 9,000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ಹೊರಡಿಸಿದ್ದು,ಈ ಮೂಲಕ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶವನ್ನು ಎತ್ತಿಹಿಡಿದಿದೆ.
ಇಂದು ದೆಹಲಿಯಲ್ಲಿ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ತಮಿಳುನಾಡಿಗೆ 9 ಸಾವಿರ ಕ್ಯೂಸೆಕ್ ನೀರು ಹರಿಸಲು ಕರ್ನಾಟಕಕ್ಕೆ ಸೂಚಿಸಲಾಗಿದೆ. ಹೀಗಾಗಿ ಕಾವೇರಿ ವಿವಾದ ಸಂಬಂಧ ಕರ್ನಾಟಕಕ್ಕೆ ಮತ್ತೆ ಭಾರಿ ಹಿನ್ನಡೆಯಾಗಿದೆ.
ಪ್ರತಿ ದಿನ ತಮಿಳುನಾಡಿಗೆ 9000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿದ್ದ ಆದೇಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಎತ್ತಿಹಿಡಿಯಲಾಗಿದೆ.
ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯದಿಂದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಹಾಗೂ ಕಾವೇರಿ ನೀರಾವರಿ ನಿಗಮ ಎಂಡಿ ಮಹೇಶ್ ಭಾಗಿಯಾದರು. ತಮಿಳುನಾಡಿನಿಂದ ನೀರಾವರಿ ಕಾರ್ಯದರ್ಶಿ ಪ್ರಶಾಂತ್, ಕಾವೇರಿ ತಾಂತ್ರಿಕ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯಂ ಭಾಗಿಯಾದರು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ,ಇಂದು ಒಂದೂವರೆ ಗಂಟೆಗಳ ಕಾಲ ಸಭೆ ಮಾಡಿದ್ದೇವೆ. ನಿನ್ನೆ ಕೊಟ್ಟಿರುವ ಶಿಫಾರಸನ್ನು ಪಾಲಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚಿಸಿದೆ.ತಮಿಳುನಾಡು 28 ಟಿಎಂಸಿ ನೀರಿನ ಬೇಡಿಕೆ ಇಟ್ಟಿತ್ತು.ಆದರೆ,ಪ್ರಾಧಿಕಾರ ಅದನ್ನು ಒಪ್ಪಿಲ್ಲ. ಮುಂದೆ ಉತ್ತಮ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಆಶಯ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ನೀರು ಹರಿಸಲು ಸೂಚಿಸಿದೆ ಎಂದು ತಿಳಿಸಿದರು.
ಕಾನೂನು ಹೋರಾಟದ ಬಗ್ಗೆ, ಕಾನೂನು ತಂಡ ನಿರ್ಧಾರ ಮಾಡಲಿದೆ.ಇಂದಿನ ಬೆಳವಣಿಗೆಯನ್ನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಗಮನಕ್ಕೆ ತರುತ್ತೇವೆ ಎಂದು ಹೇಳಿದರು.

Share with Friends
author avatar
Digital Desk