LatestTop Storiesರಾಜಕೀಯ | Politicsರಾಜ್ಯ-Karnataka

ನಾಗೇಂದ್ರ ಪ್ರಕರಣ : ಸರ್ಕಾರ ಎಲ್ಲದಕ್ಕೂ ಚರ್ಚೆಗೆ ಸಿದ್ಧ

ಬೆಂಗಳೂರು.ಆ.21-ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷ ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ನಾಯಕರಿಗೆ ನಿಜವಾಗಿಯೂ ಧೈರ್ಯವಿದ್ದರೆ ನೋಟಿಸ್ ನೀಡಿ,ನಾಗೇಂದ್ರ ಪ್ರಕರಣದ ಕುರಿತು ಸದನದಲ್ಲಿ ಚರ್ಚೆ ನಡೆಸಲಿ ಎಂದು ಸವಾಲು ಹಾಕಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗೇಂದ್ರ ಪ್ರಕರಣ, ಸಿಐಡಿ, ಎಸ್ ಐಟಿ, ಸಿಬಿಐ ಅಥವಾ ಇಡಿ ತನಿಖೆ ಕುರಿತಾಗಿಯೂ ಚರ್ಚಿಸಲು ನಾವು ಸಿದ್ಧರಿದ್ದೇವೆ. ಆದರೆ ಬಿಜೆಪಿ ನಾಯಕರು ಚರ್ಚೆಗೆ ಬಾರದೆ ತಾವು ನಿಂತ ಜಾಗದಲ್ಲೇ ಪ್ರತಿಭಟನೆ ನಡೆಸುತ್ತಿದ್ದಾರೆ.ಯಾವ ನಿಯಮದಡಿಯ ಪ್ರತಿಭಟನೆ ಮಾಡುವುದಾದರೆ ಸದನದ ಬಾವಿಗಿಳಿದು ಮಾಡಲಿ, ಸುಮ್ಮನೆ ನಿಂತಲ್ಲೇ ಕೂಗಾಡುವುದು ಮತ್ತು ಕಿರುಚಾಡುವುದು ಸರಿಯಲ್ಲ. ಸರ್ಕಾರ ಎಲ್ಲದಕ್ಕೂ ಚರ್ಚೆಗೆ ಸಿದ್ಧವಿದೆ ಎಂದು ಕಿಡಿಕಾರಿದರು.
ಮೊದಲಿನಿಂದಲೂ ನಾವು ಚರ್ಚೆಗೆ ಬನ್ನಿ ಎಂದು ಕರೆಯುತ್ತಿದ್ದೇವೆ.ನಾಗೇಂದ್ರ ಈಗಾಗಲೇ ಪತ್ರಿಕಾಗೋಷ್ಠಿ ನಡೆಸಿ ಸಮಗ್ರ ವಿವರ ನೀಡಿದ್ದಾರೆ. ಡಿಸಿಎಂ ಪರಮೇಶ್ಚರ್ ಸದನದಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ. ಆದರೂ ವಿಪಕ್ಷಗಳು ಇದನ್ನು ಒಪ್ಪುತ್ತಿಲ್ಲ, ಚರ್ಚೆಗೂ ಬರುತ್ತಿಲ್ಲ ಮತ್ತು ನಮ್ಮ ಹೇಳಿಕೆಗಳನ್ನೂ ಸ್ವೀಕರಿಸುತ್ತಿಲ್ಲ ಎಂದು ಆಕ್ರೋಶ ವಕ್ತಪಡಿಸಿದರು.
ರಾಜ್ಯದಲ್ಲಿ ಬರಗಾಲದ ಛಾಯೆ, ಕೆಪಿಎಸ್‌ಸಿ ಹಗರಣ ಹಾಗೂ ರಾಮಮಂದಿರದ ಅಕ್ರಮದಂತಹ ಜ್ವಲಂತ ಸಮಸ್ಯೆಗಳಿವೆ. ರಾಜ್ಯದ ಕೆಲವರು ಇದರಲ್ಲಿ ಶಾಮೀಲಾಗಿದ್ದು,ಆ ಬಗ್ಗೆ ಚರ್ಚೆ ಆಗಬೇಕಿದೆ.ಆದರೆ ಬಿಜೆಪಿ ನಾಯಕರು ಕೆಪಿಎಸ್‌ಸಿ ಹಗರಣ,11 ಶಾಸಕರ ಕ್ರಾಸ್ ವೋಟಿಂಗ್, ಪಿಎಂ ಕೇರ್ಸ್ ಫಂಡ್ ಅಕ್ರಮ ಹಾಗೂ ರಾಮಮಂದಿರದ ದುರಂತವನ್ನು ಮುಚ್ಚಿಹಾಕಲು ಇಂತಹ ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದರು.
ಎಸ್‌ಐಟಿ ಹಾಗೂ ಸಿಐಡಿ ವರದಿಯಲ್ಲಿ ನಾಗೇಂದ್ರ ಹೆಸರಿಲ್ಲ.ಸಿಬಿಐ ಚಾರ್ಜ್ಶೀಟ್‌ನಲ್ಲಿ ಎರಡನೇ ಬಾರಿ ಅವರ ಹೆಸರು ಸೇರ್ಪಡೆಯಾಗಿದೆ ಎಂದರೆ ಅದು ಕೇಂದ್ರ ಸರ್ಕಾರದ ಸೂಚನೆಯಿಂದಲೇ ಆಗಿದೆ. ತಾಕತ್ತಿದ್ದರೆ ಸದನದಲ್ಲಿ ಚರ್ಚೆಗೆ ಬರಲಿ.ಸರ್ಕಾರ ಉತ್ತರ ನೀಡಲು ಹಾಗೂ ಮರುಚರ್ಚೆಗೂ ಸಂಪೂರ್ಣ ಸಿದ್ಧವಿದೆ. ನಾಗೇಂದ್ರ ಅವರ ರಾಜೀನಾಮೆ ಕೇಳಲು ಬಿಜೆಪಿಯವರು ಯಾರು? ಬಿಜೆಪಿಯವರು ನೈತಿಕತೆ ಇಟ್ಟುಕೊಂಡು ಮಾತನಾಡಬೇಕು.ಬಿಜೆಪಿ ಶಾಸಕ ಚಂದ್ರ ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದಿಲ್ಲವೇ?ಅವರನ್ನು ಯಾಕೆ ಇನ್ನೂ ಉಳಿಸಿಕೊಂಡಿದ್ದೀರಿ, ಅವರಿಂದ ರಾಜೀನಾಮೆ ಕೊಡಿಸಿದ್ದೀರಾ? ಬಿಜೆಪಿಗೇನು ಸುಪ್ರೀಂ ಕೋರ್ಟ್, ಹೈಕೋರ್ಟ್ ಅಥವಾ ಲೋಕಾಯುಕ್ತದ ಸ್ಥಾನಮಾನವಿದೆಯೇ? ಅಸ್ಸಾಂ ಮತ್ತು ಬಿಹಾರ ಮುಖ್ಯಮಂತ್ರಿಗಳ ಮೇಲೆ, ಅಷ್ಟೇ ಏಕೆ ದೇಶದ ಗೃಹ ಸಚಿವರ ಮೇಲೆಯೂ ಕೇಸ್‌ಗಳಿವೆ. ಮೊದಲು ಅವರ ರಾಜೀನಾಮೆ ಪಡೆಯಲಿ ಎಂದರು.
ವಿಪಕ್ಷಗಳಿಗೆ ಯಾವ ವಿಚಾರದ ಮೇಲೆ ಹೋರಾಡಬೇಕೆಂಬ ಸ್ಪಷ್ಟತೆ ಇಲ್ಲ, ಅವರ ಬಳಿ ಯಾವುದೇ ಕಾರ್ಯಯೋಜನೆಯೂ ಇಲ್ಲ. ಏನೋ ಆಗುತ್ತದೆ ಎಂದು ಕಣಕ್ಕಿಳಿದು ಈಗ ಅದರಿಂದ ಹಿಂದೆ ಸರಿಯಲು ಸಾಧ್ಯವಾಗುತ್ತಿಲ್ಲ. ಬಾವಿಗಿಳಿದು ಹೋರಾಟವನ್ನೂ ಮಾಡುತ್ತಿಲ್ಲ, ನೋಟಿಸ್ ನೀಡಿ ಚರ್ಚೆಗೂ ಸಿದ್ಧರಿಲ್ಲ. ಕೇವಲ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಈ ಪ್ರತಿಭಟನೆಯ ಹೈಡ್ರಾಮಾ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ಮಧ್ಯೆ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತು ಮಾಡುವ ಬಗ್ಗೆಇಂದು ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡಲಾಗುತ್ತದೆ. ಸರ್ಕಾರ ಸೂಕ್ತ ನಿರ್ಧಾರ ಮಾಡಿ ರಾಜ್ಯಪಾಲರಿಗೆ ತಿಳಿಸಲಾಗುತ್ತದೆ. ಬಳಿಕ ರಾಜ್ಯಪಾಲರು ಏನ್ ತೀರ್ಮಾನ ಮಾಡುತ್ತಾರೋ ನೋಡೋಣ ಎಂದರು.

Share with Friends
author avatar
Digital Desk