
ಮೋದಿ – ಅಮಿತ್ ಶಾ ಚೇಲಾಗಳಿಂದ ಪ್ರತಿಭಟನೆ : ಬಿಕೆಹೆಚ್ ವಾಗ್ದಾಳಿ
ಬೆಂಗಳೂರು, ಆ. 21- ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಶಾಸಕರ ಜನವಿರೋಧಿ ಧೋರಣೆ ಹಾಗೂ ಸದನದ ಘನತೆಗೆ ಧಕ್ಕೆ ತರುವ ನಡವಳಿಕೆಯನ್ನು ಖಂಡಿಸಿ ಕಾಂಗ್ರೆಸ್ ಸಚಿವರು, ಶಾಸಕರೊಂದಿಗೆ ಪ್ರತಿಭಟನೆ ನಡೆಸಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ತೀವ್ರವಾದ ಬರ ಪರಿಸ್ಥಿತಿ ಇದೆ. ಅದರ ಚರ್ಚೆಗೆ ಪ್ರತಿಪಕ್ಷಗಳು ಬಿಡುತ್ತಿಲ್ಲ. ಇಲ್ಲಸಲ್ಲದ ಆರೋಪ ಮಾಡಿ ಸದನಲ್ಲಿ ಸುಗಮ ಕಲಾಪಗಳು ನಡೆಯಲು ಅಡ್ಡಿಯುಂಟು ಮಾಡುತ್ತಿದ್ದಾರೆ. ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಚರ್ಚೆ ಮಾಡಿ ಕೇಂದ್ರಕ್ಕೆ ಬೇಡಿಕೆ ಇಡುತ್ತೇವೆ. ಆ ಬೇಡಿಕೆಯನ್ನು ಈಡೇರಿಸಲು ಆಗಲ್ಲ ಎಂದು ಮೋದಿ ಮತ್ತು ಅಮಿತ್ ಶಾ ಚೇಲಾಗಳು ಇಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಬಿಜೆಪಿ ನಾಯಕರ ಮೇಲೆ ಕೊಲೆ, ಅತ್ಯಾಚಾರ, ಭ್ರಷ್ಟಾಚಾರ ಆರೋಪ ಇದೆ. ಇವರು ನಮಗೆ ಪಾಠ ಹೇಳಬೇಕಿಲ್ಲ. ವಾಲ್ಮೀಕಿ ಹಗರಣದಲ್ಲಿ ಎಸ್ಐಟಿ ನಾಗೇಂದ್ರರವರಿಗೆ ಕ್ಲೀನ್ ಚಿಟ್ ಕೊಟ್ಟಿದೆ ಎಂದು ಅವರು ಹೇಳಿದರು.
ಯಾರ ಮೇಲೆ ಆಗಲಿ, ಭ್ರಷ್ಟಾಚಾರ ಆರೋಪ ಸಾಬೀತಾದರೆ ಅವರ ವಿರುದ್ಧ ಕ್ರಮ ಆಗುತ್ತದೆ ಎಂದರು.
