ಕವಲಗಿ ಗ್ರಾಮದಲ್ಲಿ ವಿದ್ಯಾರ್ಥಿಗಳ ಆಕ್ರೋಶ: ಬಸ್ ನಿಲುಗಡೆಗೆ ಆಗ್ರಹಿಸಿ ಹೆದ್ದಾರಿ ತಡೆ
ವಿಜಯಪುರ: ಬಸ್‌ಗಳು ನಿಲುಗಡೆ ಮಾಡದಿರುವುದರಿಂದ ಶಾಲಾ-ಕಾಲೇಜುಗಳಿಗೆ ತೆರಳಲು ತೊಂದರೆಯಾಗುತ್ತಿದೆ ಎಂದು ಆರೋಪಿಸಿ ವಿಜಯಪುರ ಜಿಲ್ಲೆಯ ಕವಲಗಿ ಗ್ರಾಮದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಕವಲಗಿ ಗ್ರಾಮದಲ್ಲಿ ಬಸ್ ನಿಲುಗಡೆ ಮಾಡುವಂತೆ ಆಗ್ರಹಿಸಿದ ವಿದ್ಯಾರ್ಥಿಗಳು ಕಲಬುರಗಿ–ವಿಜಯಪುರ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದಲ್ಲಿ ಸಮರ್ಪಕ ಬಸ್ ಸೇವೆ ಇಲ್ಲದ ಕಾರಣ ಪ್ರತಿನಿತ್ಯ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಪರದಾಡುವಂತಾಗಿದೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತ ಪಡಿಸಿದರು
ವಿಜಯಪುರ, ಕಲಬುರಗಿ ಹಾಗೂ ಸಿಂದಗಿ ಘಟಕಗಳಿಂದ ಸಂಚರಿಸುವ ಹಲವು ಬಸ್‌ಗಳು ಕವಲಗಿ ಗ್ರಾಮದಲ್ಲಿ ನಿಲುಗಡೆ ಮಾಡುತ್ತಿಲ್ಲ. ಇದರಿಂದ ಬಸ್‌ಗಾಗಿ ಕಾಯುವ ವಿದ್ಯಾರ್ಥಿಗಳು ರಸ್ತೆ ಬದಿಯಲ್ಲಿ ಗಂಟೆಗಟ್ಟಲೆ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವೊಮ್ಮೆ ಬಸ್‌ಗಳು ನಿಲುಗಡೆ ಮಾಡದೆ ತೆರಳುವುದರಿಂದ ವಿದ್ಯಾರ್ಥಿಗಳು ಮುಂದಿನ ಬಸ್‌ಗಾಗಿ ಕಾಯಬೇಕಾಗುತ್ತಿದೆ ಎಂದು ಆರೋಪಿಸಲಾಗಿದೆ.
ಪ್ರತಿದಿನದ ಶಿಕ್ಷಣಕ್ಕೆ ಸಾರಿಗೆ ವ್ಯವಸ್ಥೆಯೇ ಪ್ರಮುಖವಾಗಿರುವ ಹಿನ್ನೆಲೆಯಲ್ಲಿ, ಗ್ರಾಮದಲ್ಲಿ ಬಸ್‌ಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
ವಿದ್ಯಾರ್ಥಿಗಳ ಹೆದ್ದಾರಿ ತಡೆ ಪ್ರತಿಭಟನೆಯಿಂದ ಕಲಬುರಗಿ–ವಿಜಯಪುರ ಹೆದ್ದಾರಿಯಲ್ಲಿ ಬಸ್ ಹಾಗೂ ವಾಹನಗಳು ಸಾಲುಗಟ್ಟಿ ನಿಂತವು. ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಕವಲಗಿ ಗ್ರಾಮದಲ್ಲಿ ನಿಗದಿತ ಬಸ್ ನಿಲುಗಡೆ ವ್ಯವಸ್ಥೆ ಕಲ್ಪಿಸಿ, ಶಾಲಾ-ಕಾಲೇಜು ಸಮಯಕ್ಕೆ ಅನುಗುಣವಾಗಿ ಬಸ್‌ಗಳು ನಿಲುಗಡೆ ಮಾಡುವಂತೆ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಬೇಕು ಎಂಬುದು ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಯಾಗಿದೆ.
