
ಬೆಂಗಳೂರಿನಲ್ಲಿ ಸ್ವಾತಂತ್ರ್ಯೋತ್ಸವಕ್ಕೆ ಸಕಲ ಸಿದ್ಧತೆ
ಬೆಂಗಳೂರು,ಆ.14: ನಗರದ ಫೀಲ್ಡ್ ಮಾರ್ಷಲ್ ಮಾಣೆಕ್ ಶಾ ಪರೇಡ್ ಮೈದಾನದಲ್ಲಿ ಆ.15ರಂದು ನಡೆಯಲಿರುವ 80ನೇ ಸ್ವಾತಂತ್ರ್ಯೋತ್ಸವ ಸಮಾರಂಭಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಕಾರ್ಯಕ್ರಮದ ಭದ್ರತೆಗಾಗಿ ಡಿಸಿಪಿ,ಎಸಿಪಿ, ಪಿಐ, ಪಿಎಸ್ಐ ಸೇರಿ 1,100 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜಿಸಲಾಗಿದ್ದು, ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಪ್ರತ್ಯೇಕವಾಗಿ 1,583 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
ಭದ್ರತಾ ವ್ಯವಸ್ಥೆಯ ಭಾಗವಾಗಿ ಮೈದಾನದ ಒಳ ಹಾಗೂ ಹೊರಭಾಗದಲ್ಲಿ 110 ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಸುತ್ತಮುತ್ತಲಿನ ಪ್ರದೇಶಗಳ ನಿಗಾವಣೆಗೆ ಹೆಚ್ಚುವರಿಯಾಗಿ 100 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.ಪ್ರವೇಶ ದ್ವಾರಗಳಲ್ಲಿ 4 ಬ್ಯಾಗೇಜ್ ಸ್ಕ್ಯಾನರ್, 20 ಡಿಎಫ್ಎಂಡಿ ಹಾಗೂ 40 ಎಚ್ಎಚ್ಎಂಡಿಗಳನ್ನು ಬಳಸಲಾಗುತ್ತಿದೆ.

ಇದರೊಂದಿಗೆ 7 ಕೆಎಸ್ಆರ್ಪಿ, ಎಆರ್ ತುಕಡಿಗಳು, 4 ಅಗ್ನಿಶಾಮಕ ವಾಹನಗಳು, 3 ಆಂಬುಲೆನ್ಸ್ಗಳು ಹಾಗೂ 4 ಬಾಂಬ್ ನಿಷ್ಕ್ರಿಯ ದಳಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ತುರ್ತು ಪರಿಸ್ಥಿತಿ ಎದುರಿಸಲು ಕ್ವಿಕ್ ರೆಸ್ಪಾನ್ಸ್ ಟೀಮ್, ಡಿ-ಸ್ಕ್ವಾಡ್ ಹಾಗೂ ಆರ್ವಿ ತಂಡವೂ ಸನ್ನದ್ಧವಾಗಿರಲಿದೆ. ಕಳೆದ 15 ದಿನಗಳಿಂದಲೇ ಪರೇಡ್ ಮೈದಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರು ನಿರಂತರ ನಿಗಾ ವಹಿಸಿದ್ದಾರೆ.
ಇನ್ನು ಗೇಟ್ ನಂ. 2 ಮೂಲಕ ಪಿಂಕ್ ಬ್ಯಾಡ್ಜ್ ಹೊಂದಿರುವ ವಿಐಪಿಗಳಿಗೆ ಬ್ಲಾಕ್ 1ಎ ಹಾಗೂ ತಿಳಿ ಪಿಂಕ್ ಬ್ಯಾಡ್ಜ್ ಹೊಂದಿರುವ ವಿಐಪಿಗಳಿಗೆ ಬ್ಲಾಕ್ 2 ಮತ್ತು 3ಕ್ಕೆ ಪ್ರವೇಶ ಕಲ್ಪಿಸಲಾಗಿದೆ. ಗೇಟ್ ನಂ. 4 ಮೂಲಕ ಬಿಳಿ ಬ್ಯಾಡ್ಜ್ ಹೊಂದಿರುವವರಿಗೆ ಬ್ಲಾಕ್ 4, 5 ಮತ್ತು 6ಕ್ಕೆ ಹಾಗೂ ಮಾಧ್ಯಮದವರಿಗೆ ಪ್ರವೇಶವಿದೆ. ಗೇಟ್ ನಂ. 5 ಮೂಲಕ ಹಸಿರು ಬ್ಯಾಡ್ಜ್ ಹಾಗೂ ಇ-ಪಾಸ್ ಹೊಂದಿರುವ ಸಾರ್ವಜನಿಕರಿಗೆ ಬ್ಲಾಕ್ 7, 8 ಮತ್ತು 9ಕ್ಕೆ ಪ್ರವೇಶ ಕಲ್ಪಿಸಲಾಗಿದೆ. ಭದ್ರತಾ ದೃಷ್ಟಿಯಿಂದ ಎಲ್ಲಾ ಪ್ರವೇಶ ದ್ವಾರಗಳಲ್ಲಿ ತಪಾಸಣೆ ನಡೆಸಲಾಗುತ್ತಿದ್ದು, ಕಾರ್ಯಕ್ರಮಕ್ಕೆ ಆಗಮಿಸುವವರು ಪೊಲೀಸರೊಂದಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.
