Latestರಾಜ್ಯ-Karnataka

ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರಿಗೆ ಸಂಕಷ್ಟ: ಆರಗ ಜ್ಞಾನೇಂದ್ರ

ಬೆಂಗಳೂರು : ಗುಟ್ಕಾ ಹಾಗೂ ಪಾನ್‌ ಮಸಾಲಾ ನಿಷೇಧದಿಂದ ಅಡಿಕೆ ಬೆಳೆಗಾರರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎಂದು ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಅಡಿಕೆಯಿಂದ ತಯಾರಾಗುವ ಗುಟ್ಕಾ ಹಾಗೂ ಪಾನ್‌ ಮಸಾಲಾ ಬ್ಯಾನ್‌ ಮಾಡುವ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗಾರರು ತಲ್ಲಣಗೊಂಡಿದ್ದಾರೆ. ಇದರಿಂದ ರಾಜ್ಯದಲ್ಲಿ ಅಡಿಕೆ ಮಾರುಕಟ್ಟೆ ಕುಸಿಯುವ ಪರಿಸ್ಥಿತಿ ಎದುರಾಗಬಹುದು ಎಂದು ಅವರು ಹೇಳಿದ್ದಾರೆ.

ದೇಶದಲ್ಲಿ ಉತ್ಪಾದನೆಯಾಗುವ ಅಡಿಕೆಯಲ್ಲಿ ಶೇ.60ಕ್ಕಿಂತ ಹೆಚ್ಚು ಅಡಿಕೆ ಕರ್ನಾಟಕದಲ್ಲೇ ಉತ್ಪಾದನೆಯಾಗುತ್ತದೆ. 5 ಲಕ್ಷಕ್ಕೂ ಹೆಚ್ಚು ಕುಟುಂಬಗಳು ನೇರವಾಗಿ ಅಡಿಕೆ ಕೃಷಿಯನ್ನು ಅವಲಂಬಿಸಿದ್ದು, ಪರೋಕ್ಷವಾಗಿ 10 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಅಡಿಕೆ ಬೆಳೆಯನ್ನೇ ಜೀವನಾಧಾರವಾಗಿಸಿಕೊಂಡಿವೆ. ರಾಜ್ಯದ 12 ಜಿಲ್ಲೆಗಳಲ್ಲಿ ಅಡಿಕೆ ಬೆಳೆಯ ವಿಸ್ತರಣೆ ಕೂಡ ಆಗುತ್ತಿದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಅಡಿಕೆಯಿಂದ ಸರ್ಕಾರಕ್ಕೆ ಜಿಎಸ್‌ಟಿ ರೂಪದಲ್ಲಿ ಸುಮಾರು ₹375 ಕೋಟಿ ಆದಾಯ ಬರುತ್ತಿದೆ. ಹೀಗಾಗಿ ಅಡಿಕೆ ಬೆಳೆಯುವ ರಾಜ್ಯದಲ್ಲೇ ಗುಟ್ಕಾ ನಿಷೇಧದಿಂದ ಅಡಿಕೆ ಮಾರುಕಟ್ಟೆಗೆ ಹೊಡೆತ ನೀಡಬಾರದು. ಅಡಿಕೆಗೆ ಪರ್ಯಾಯ ಮಾರುಕಟ್ಟೆ ಹಾಗೂ ಬೆಲೆ ವ್ಯವಸ್ಥೆ ಕಂಡುಹಿಡಿಯುವವರೆಗೆ ನಿಷೇಧ ಜಾರಿಗೊಳಿಸಬಾರದು ಎಂದು ಅವರು ಒತ್ತಾಯಿಸಿದ್ದಾರೆ.

ಗುಟ್ಕಾ ತಯಾರಿಕೆಗೆ ಅಡಿಕೆ ಬಳಕೆಯಾಗುತ್ತಿರುವುದರಿಂದಲೇ ರಾಜ್ಯದಲ್ಲಿ ಅಡಿಕೆ ಬೆಳೆ ವಿಸ್ತರಣೆಯಾಗಿದೆ. ಅಡಿಕೆ ಬೆಳೆಗಾರರಿಗೆ ಯಾವುದೇ ರೀತಿಯ ಹಾನಿಯಾಗದಂತೆ ಸರ್ಕಾರ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

ಮಲೆನಾಡು ಭಾಗದ ವಿವಿಧ ಪಕ್ಷಗಳ ಶಾಸಕರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಈ ವಿಚಾರವನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ. ಯಾವುದೇ ರೀತಿಯ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ನಮ್ಮ ಮನವಿಯನ್ನು ಸ್ವೀಕರಿಸಿದ್ದಾರೆ. ಸದನದಲ್ಲಿ ಈ ಬಗ್ಗೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಅವರು ತಿಳಿಸಿದ್ದಾರೆ ಎಂದು ಆರಗ ಜ್ಞಾನೇಂದ್ರ ಹೇಳಿದರು.

ಕಸ್ತೂರಿ ರಂಗನ್‌ ವರದಿ ಜಾರಿ ವಿರೋಧ

ಕಸ್ತೂರಿ ರಂಗನ್‌ ವರದಿ ಜಾರಿ ವಿಚಾರವಾಗಿಯೂ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದು, ಸೋಮವಾರ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ವರದಿ ಜಾರಿ ಮಾಡದಂತೆ ಹಾಗೂ ತಕರಾರು ಅರ್ಜಿ ಸಲ್ಲಿಸುವಂತೆ ಮನವಿ ಮಾಡುತ್ತೇವೆ ಎಂದರು.

ಕಸ್ತೂರಿ ರಂಗನ್‌ ವರದಿ ಜಾರಿಯಾದರೆ ಪಶ್ಚಿಮ ಘಟ್ಟದ ಜನರಿಗೆ ಸಾಕಷ್ಟು ಸಮಸ್ಯೆಯಾಗಲಿದೆ. ಈ ಹಿಂದೆ ಎಲ್ಲಾ ಸರ್ಕಾರಗಳೂ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿ ಒಪ್ಪಿಗೆ ನೀಡಿರಲಿಲ್ಲ. ಇದೀಗ ರಾಜ್ಯ ಸರ್ಕಾರವೂ ಜನರ ಹಿತದೃಷ್ಟಿಯಿಂದ ವರದಿ ಜಾರಿ ಮಾಡದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡುತ್ತೇವೆ ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

Share with Friends
author avatar
News Desk