
ಸಿಎಂ ಆದ ಬಳಿಕ ಮೊದಲ ಬಾರಿಗೆ ವಿಧಾನಸಭೆಯಲ್ಲಿ ಡಿಕೆಶಿ ಭಾಷಣ : ಶ್ಲೋಕ-ಸುಭಾಷಿತಗಳ ಸುರಿಮಳೆ
ಬೆಂಗಳೂರು, ಆ.13: “ಸಾವಿನ ಯಜಮಾನ ಭಗವಂತ. ಈ ಜಗತ್ತಿಗೆ ತೋಟಗಾರ ಅವನು. ನಾವು ಆ ತೋಟದಲ್ಲಿ ನಮ್ಮ ನಮ್ಮ ಬೀಜಗಳನ್ನು ಬಿತ್ತಿ, ಸ್ವಭಾವಕ್ಕೆ ತಕ್ಕಂತೆ ಬೆಳೆದು, ಕೊನೆಗೆ ಸಾವನ್ನು ಪಡೆದು ಹೋಗುತ್ತೇವೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಗುರುವಾರ ಆರಂಭಗೊಂಡ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಇತ್ತೀಚೆಗೆ ನಿಧನರಾದ ಗಣ್ಯರು, ರಾಜಕೀಯ ನಾಯಕರು ಹಾಗೂ ಸಾಧಕರಿಗೆ ಸಂತಾಪ ಸೂಚಕ ನಿರ್ಣಯದ ಮೇಲೆ ಮಾತನಾಡಿದ ಸಿಎಂ, ಶ್ಲೋಕ ಹಾಗೂ ಸುಭಾಷಿತಗಳ ಮೂಲಕ ಅಗಲಿದವರನ್ನು ಸ್ಮರಿಸಿದರು.
ಸುಧಾಕರ್ ಅಗಲಿಕೆ ಕಷ್ಟದಿಂದಲೇ ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ
ಮಾಜಿ ಸಚಿವ ಡಿ. ಸುಧಾಕರ್ ಅವರ ನಿಧನವನ್ನು ಸ್ಮರಿಸಿದ ಸಿಎಂ, “ಸುಧಾಕರ್ ನನ್ನ ಆತ್ಮೀಯ ಗೆಳೆಯ. ಇಬ್ಬರದೂ ಒಂದೇ ವಯಸ್ಸು. ಅವರ ಉಸಿರು ಇಷ್ಟು ಬೇಗ ನಿಲ್ಲುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ನನ್ನನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಬೇಕು ಎಂದು ಅವರು ಬಹಳ ಆಸೆಪಟ್ಟಿದ್ದರು” ಎಂದು ಭಾವುಕರಾದರು.
“ಕಾಲಿನ ಶಸ್ತ್ರಚಿಕಿತ್ಸೆಗೆ ತೆರಳಿದಾಗ ಹೆಚ್ಚು ಕಡಿಮೆಯಾಗಿ ಸಾವಾಯಿತು. ಅವರನ್ನು ಉಳಿಸಿಕೊಳ್ಳಲು ನಾವು ಬಹಳ ಪ್ರಯತ್ನ ಮಾಡಿದೆವು. ಆದರೆ ಸಾಧ್ಯವಾಗಲಿಲ್ಲ. ಅವರ ಸಾವನ್ನು ಬಹಳ ಕಷ್ಟದಿಂದಲೇ ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ” ಎಂದರು.
“ಹುಟ್ಟು ನಮ್ಮದಲ್ಲ, ಸಾವು ನಮ್ಮದಲ್ಲ. ಇದರ ನಡುವೆ ಬರುವ ಬದುಕು ಮಾತ್ರ ನಮ್ಮದು. ಸಾವನ್ನು ಒಪ್ಪಿಕೊಳ್ಳಬೇಕು ಎಂಬ ಸಂದೇಶವನ್ನು ಶ್ರೀಕೃಷ್ಣ ನೀಡಿದ್ದಾನೆ. ಸಾವಿಲ್ಲದ ಮನೆಯಿಂದ ಸಾಸಿವೆ ತೆಗೆದುಕೊಂಡು ಬಾ ಎಂದು ಬುದ್ಧ ಅರಿವು ಮೂಡಿಸಿದ್ದಾನೆ” ಎಂದು ಶಿವಕುಮಾರ್ ಹೇಳಿದರು.
ಸುಧಾಕರ್ ಹೆಸರಿನಲ್ಲಿ ಸಣ್ಣ ನೀರಾವರಿ ಯೋಜನೆ
ಸುಧಾಕರ್ ಅವರು ನೀರಾವರಿ ಅಭಿವೃದ್ಧಿಯ ಬಗ್ಗೆ ಸಾಕಷ್ಟು ಕನಸು ಕಂಡಿದ್ದರು. ಅವರ ನೆನಪನ್ನು ಶಾಶ್ವತಗೊಳಿಸುವ ನಿಟ್ಟಿನಲ್ಲಿ ಅವರ ಜಿಲ್ಲೆಯ ಪ್ರಮುಖ ಸಣ್ಣ ನೀರಾವರಿ ಯೋಜನೆಗೆ ಸುಧಾಕರ್ ಅವರ ಹೆಸರನ್ನು ನಾಮಕರಣ ಮಾಡಲು ನಿರ್ಧರಿಸಿರುವುದಾಗಿ ಸಿಎಂ ಘೋಷಿಸಿದರು.
ವೆಂಕಟರಮಣಪ್ಪ, ರಾಮಚಂದ್ರೇಗೌಡರ ಸ್ಮರಣೆ
ಪಾವಗಡದ ಮಾಜಿ ಸಚಿವ ವೆಂಕಟರಮಣಪ್ಪ ಅವರನ್ನು ಆತ್ಮೀಯವಾಗಿ ಸ್ಮರಿಸಿದ ಸಿಎಂ, ಅವರನ್ನು “ತೋಳ” ಎಂದು ಕರೆಯುತ್ತಿದ್ದೆವು ಎಂದರು. ಸಣ್ಣ ಕೈಗಾರಿಕೆ, ರೇಷ್ಮೆ-ಜವಳಿ ಕ್ಷೇತ್ರ ಹಾಗೂ ಕುಡಿಯುವ ನೀರಿಗಾಗಿ ಅವರು ನಡೆಸಿದ ಹೋರಾಟವನ್ನು ಸ್ಮರಿಸಿದರು.
ಮಾಜಿ ಸಚಿವ ರಾಮಚಂದ್ರೇಗೌಡರನ್ನು ಸಜ್ಜನ ರಾಜಕಾರಣಿ ಎಂದು ಬಣ್ಣಿಸಿದ ಶಿವಕುಮಾರ್, ಯಡಿಯೂರಪ್ಪ ಅವರ ಬಲಗೈ ಬಂಟರಾಗಿದ್ದ ಅವರು ಐದು ಬಾರಿ ವಿಧಾನಪರಿಷತ್ ಸದಸ್ಯರಾಗಿ, ಸರಳತೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದರು ಎಂದು ಹೇಳಿದರು.
ಚೆನ್ನಮ್ಮನವರ ಸರಳ ಬದುಕಿಗೆ ಸಿಎಂ ನಮನ
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚನ್ನಮ್ಮ ಅವರ ನಿಧನವನ್ನು ಸ್ಮರಿಸಿದ ಸಿಎಂ, “ಚನ್ನಮ್ಮ ಅವರು ಸರಳವಾಗಿ ಬದುಕಿದ ಹಿರಿಜೀವ. ರಾಜಕಾರಣಿಗಳ ಮನೆಯಲ್ಲಿ ಹೆಣ್ಣುಮಕ್ಕಳು ಹೇಗಿರಬೇಕು ಎಂಬುದಕ್ಕೆ ಅವರ ಬದುಕೇ ಸಾಕ್ಷಿ” ಎಂದರು.
ಚನ್ನಮ್ಮ ಅವರ ಮಾರ್ಗದರ್ಶನದಿಂದಲೇ ದೇವೇಗೌಡರು ಪ್ರಧಾನಿಯಾಗಲು ಹಾಗೂ ಅವರ ಮಕ್ಕಳು ರಾಜ್ಯದ ಜನರ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು ಎಂದು ಶಿವಕುಮಾರ್ ಹೇಳಿದರು. ಚನ್ನಮ್ಮ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲು ತಾವು ಗಟ್ಟಿ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದರು.
ಗಾನಕೋಗಿಲೆ ಎಸ್. ಜಾನಕಿ ಸ್ಮರಣೆ
ಗಾನಕೋಗಿಲೆ ಎಸ್. ಜಾನಕಿ ಅವರ ನಿಧನಕ್ಕೂ ಸಿಎಂ ಸಂತಾಪ ಸೂಚಿಸಿದರು. “ಪ್ರೀತಿ, ನೋವು, ಭಕ್ತಿ, ತಾಯ್ತನ ಹಾಗೂ ಗೆಳೆತನಕ್ಕೆ ಧ್ವನಿ ನೀಡಿದ ದೊಡ್ಡ ಗಾಯಕಿ ಜಾನಕಿ. ಕಲಾವಿದರಿಗೆ ಸಾವಿಲ್ಲ. ಅವರ ದನಿಯ ಮೂಲಕ ಅವರು ಸದಾ ಜೀವಂತವಾಗಿರುತ್ತಾರೆ” ಎಂದು ಹೇಳಿದರು.
ಮೈಸೂರಿನಲ್ಲೇ ಅಂತಿಮ ಸಂಸ್ಕಾರ ನಡೆಯಬೇಕು ಎಂಬ ಎಸ್. ಜಾನಕಿ ಅವರ ಆಶಯವನ್ನು ಸ್ಮರಿಸಿದ ಸಿಎಂ, ಅವರ ಹಾಡುಗಳು ಹಾಗೂ ನೆನಪುಗಳು ಸದಾ ನಮ್ಮೊಂದಿಗಿರಲಿವೆ ಎಂದರು.
ಇದೇ ವೇಳೆ ಮಾಜಿ ಸಚಿವರು ಹಾಗೂ ಶಾಸಕರಾದ ವಿ. ಶ್ರೀನಿವಾಸನ್, ಕೆ.ಆರ್. ಶ್ರೀನಿವಾಸಯ್ಯ, ಎಚ್.ಎಸ್. ಪುಟ್ಟರಂಗನಾಥ್ ಸೇರಿದಂತೆ ಅಗಲಿದ ಹಲವು ಗಣ್ಯರನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಮರಿಸಿ ನುಡಿನಮನ ಸಲ್ಲಿಸಿದರು.
